ಧಾರವಾಡ : ಧಾರವಾಡ ಜಿಲ್ಲಾ ಟೆನ್ನಿಸ್ ಅಸೋಷಿಯೇಷನ್ ಆತಿಥ್ಯದಲ್ಲಿ ಆಯೋಜಿಸಿರುವ ಅಂತರಾಷ್ಟ್ರೀಯ ಪುರುಷ ಟೆನ್ನಿಸ್ ಪಂದ್ಯಾವಳಿಯು ನಾಳೆ ಅ.17 ರಂದು ಬೆಳಿಗ್ಗೆ 8-30 ಗಂಟೆಗೆ ಜಿಲ್ಲಾ ಟೆನ್ನಿಸ್ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ ಜಿಲ್ಲಾ ಟೆನ್ನಿಸ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪಂದ್ಯಾವಳಿಯನ್ನು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಉದ್ಘಾಟಿಸಲಿದ್ದು, ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಗಣಿ, ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಶಿ, ರಾಜ್ಯ ಕ್ರೀಡಾ ಹಾಗೂ ಯುವಸಬಲೀಕರಣ ಕ್ರೀಡಾ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಸಚಿವ ಬಿ. ನಾಗೇಂದ್ರ, ಶಾಸಕರಾದ ವಿನಯ ಕುಲಕರ್ಣಿ, ಅರವಿಂದ ಬೆಲ್ಲದ ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು. ಭಾರತೀಯ ಕ್ರಿಕೇಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಸಂಸದ ಮೊಹಮ್ಮದ್ ಅಜರುದ್ದೀನ್ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಅಂತರಾಷ್ಟ್ರೀಯ ಪುರುಷ ಪಂದ್ಯಾವಳಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಅ.15 ರಿಂದ 16 ರ ವರೆಗೆ ಅರ್ಹತಾ ಸುತ್ತುಗಳನ್ನು ಮಾಡಲಾಗಿದ್ದು, ಅರ್ಹರ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. ಅ.17 ರಿಂದ 22 ರ ವರೆಗೆ ಮುಖ್ಯ ಪಂದ್ಯಾವಳಿಗಳು ನಡೆಯಲಿವೆ. ಅ.21 ರಂದು ಡಬಲ್ಸ್ ಫೈನಲ್ಸ್ ಮತ್ತು ಅ.22 ರಂದು ಸಿಂಗಲ್ಸ್ ಫೈನಲ್ಸ್ ಪಂದ್ಯಗಳು ನಡೆಯಲಿವೆ.
ಅ.16 ರ ಸೋಮವಾರ ಪಂದ್ಯಾವಳಿಯ ಡ್ರಾ ಸಮಾರಂಭ, ಅ.17 ರ ಮಂಗಳವಾರ ಬೆಳಿಗ್ಗೆ 8-30 ರಿಂದ 9 ಗಂಟೆಯವರೆಗೆ ಪಂದ್ಯಾವಳಿಯ ಉದ್ಘಾಟನೆ, ಅ.21 ರ ಶನಿವಾರದಂದು ಮಧ್ಯಾಹ್ನ 3 ಗಂಟೆಗೆ ಡಬಲ್ಸ್ ಫೈನಲ್ಸ್ ಮತ್ತು ಅ.22 ರ ರವಿವಾರದಂದು ಬೆಳಿಗ್ಗೆ 11 ಗಂಟೆಗೆ ಸಿಂಗಲ್ಸ್ ಫೈನಲ್ಸ್ ಪಂದ್ಯಾವಳಿ ನಡೆಯಲಿವೆ. ಎಂದು ಜಿಲ್ಲಾ ಟೆನ್ನಿಸ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.