ಬೆಂಗಳೂರು: ಈರುಳ್ಳಿ ದರ ಏರುಗತಿಯಲ್ಲಿ ಸಾಗಿಗಿದ್ದು, ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಕಣ್ಣೀರು ತರಿಸುವುದು ಖಚಿತವಾಗಿದೆ.
ಮುಂಗಾರು ಮಳೆ ಕೊರತೆ, ರೋಗಬಾಧೆ ಸೇರಿ ಹಲವು ಕಾರಣದಿಂದ ಈರುಳ್ಳಿ ಬೆಳೆದ ರೈತರು ಬೆಳೆ ಇಲ್ಲದೆ ಕಂಗಾಲಾಗಿದ್ದಾರೆ. ಗ್ರಾಹಕರ ಜೇಬಿಗೂ ಈರುಳ್ಳಿ ದರ ಏರಿಕೆ ಕತ್ತರಿ ಬೀಳಲಿದೆ. ಈ ಬಾರಿ ಶೇಕಡ 25ರಷ್ಟು ರೈತರು ಈರುಳ್ಳಿ ಬೆಳೆದಿದ್ದಾರೆ. ಶೇಕಡ 75ರಷ್ಟು ಈರುಳ್ಳಿ ಬೆಳೆದಿಲ್ಲ.
ಕೆಜಿಗೆ 20 -25 ಆಸುಪಾಸಿನಲ್ಲಿದ್ದ ಈರುಳ್ಳಿ ದರ 40 ರೂ.ಗೆ ತಲುಪಿದ್ದು. ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಗದಗ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆ ಕೊರತೆ, ಸುಳಿ ರೋಗ ಕಾರಣದಿಂದ ಈರುಳ್ಳಿ ಇಳುವರಿ ಕಡಿಮೆಯಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಈರುಳ್ಳಿ ಪೂರೈಕೆ ಸಾಧ್ಯವಾಗುತ್ತಿಲ್ಲ. ಹೊಸ ಇಳುವರಿ ಶೇಕಡ 40ರಷ್ಟು ಕಡಿಮೆಯಾಗಿದ್ದು, ಶೇಕಡ 25 ರಷ್ಟು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಸಗಟು ಮಾರುಕಟ್ಟೆಯಲ್ಲಿ ಒಂದು ಕೆಜಿ ಈರುಳ್ಳಿ ದರ 10 ರಿಂದ 30 ರೂ. ಇದ್ದು, ಚಿಲ್ಲರೆ ದರ 30 ರಿಂದ 35 ರೂ. ಇದೆ. ಕೆಲವು ಮಾರುಕಟ್ಟೆಗಳಲ್ಲಿ 40 ರಿಂದ 45 ರೂ.ಗೆ ಏರಿಕೆಯಾಗಿದೆ. ಈರುಳ್ಳಿ ದರ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.