ಬೆಂಗಳೂರು: ಬೆಂಗಳೂರಿನ ಸಾರ್ವಜನಿಕ ಉದ್ಯಾನವನದಲ್ಲಿ ಭದ್ರತಾ ಮುಖ್ಯಸ್ಥರೆಂದು ಹೇಳಿಕೊಂಡ ಕೆಲವರು ಯುವಕರ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.
ಸಂತ್ರಸ್ತರು ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಸ್ಕೇಟರ್‌ಗಳ ಗುಂಪನ್ನು ಗೂಂಡಾಗಳು ನಿಂದಿಸಿ ಹಲ್ಲೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಪಾರ್ಕ್‌ನಲ್ಲಿ ಸ್ಕೇಟಿಂಗ್ ನಿಲ್ಲಿಸುವ ವಿಚಾರಕ್ಕೆ ಯುವಕರು ಮತ್ತು ಗೂಂಡಾಗಳ ನಡುವೆ ವಾಗ್ವಾದ ನಡೆದಿದೆ.
ಉದ್ಯಾನದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿದ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುವಕರು ಆಗ್ರಹಿಸಿದ್ದಾರೆ.
ಬೆಂಗಳೂರು ಸ್ಕೇಟರ್ಸ್ ಎಂದು ಕರೆಯಲ್ಪಡುವ ಸ್ಕೇಟಿಂಗ್ ಗುಂಪಿನ ಕೆಲವು ಯುವಕರು ಕಬ್ಬನ್ ಪಾರ್ಕ್‌ನಲ್ಲಿ ಅಭ್ಯಾಸ ಮಾಡಲು ತಮ್ಮ ಸ್ಕೇಟ್‌ಗಳನ್ನು ಧರಿಸಿ ಸಿದ್ಧವಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಆದೇಶವಿದೆ ಎಂದು ಗೂಂಡಾಗಳು ಅವರ ಬಳಿಗೆ ಬಂದು ಪಾರ್ಕ್‌ನಲ್ಲಿ ಸ್ಕೇಟಿಂಗ್ ನಿಲ್ಲಿಸುವಂತೆ ಹೇಳಿದ್ದಾರೆ. ಆದೇಶಕ್ಕೆ ಸಂಬಂಧಿಸಿದಂತೆ ಸ್ಕೇಟರ್ ಗಳು ನೋಟಿಸ್ ತೋರಿಸಲು ಕೇಳಿದ್ದಾರೆ. ಆಗ ಸ್ಕೇಟರ್ ಗಳ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ಯುವಕನ ಮೇಲೂ ಗೂಂಡಾ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಯುವಕನ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ ಬಳಿಕ ಆತನ ಫೋನ್ ನೆಲಕ್ಕೆ ಬಿದ್ದಿದೆ. ಘಟನೆಯಲ್ಲಿ ದೈಹಿಕವಾಗಿ ಹಲ್ಲೆಗೊಳಗಾದ ಸ್ಕೇಟರ್‌ಗಳು ಅಪ್ರಾಪ್ತ ವಯಸ್ಕರು ಎನ್ನಲಾಗಿದ್ದು, ಇದೀಗ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದು, ಈ ಸಂಬಂಧ ಎಫ್‌ಐಆರ್ ದಾಖಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.