ತೂಕ ಕಡಿಮೆ ಮಾಡಲು ಆಹಾರದಲ್ಲಿ ಕಟ್ಟುನಿಟ್ಟು ಮತ್ತು ವ್ಯಾಯಾಮ ಎರಡೂ ಬಹಳ ಮುಖ್ಯ. ಆದರೆ ಅವುಗಳನ್ನು ಯಾವಾಗ ಯಾವ ರೀತಿ ಮಾಡಬೇಕು ಅನ್ನೋದನ್ನು ಮೊದಲು ತಿಳಿದುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಬಿಡುವಿಲ್ಲದ ಜೀವನಶೈಲಿ, ಅನಿಯಮಿತ ಆಹಾರ ಮತ್ತು ಜಂಕ್ ಫುಡ್ ಸೇವನೆಯಿಂದ ಅನೇಕರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ತೂಕ ನಿಯಂತ್ರಣಕ್ಕೆ ಸರಿಯಾದ ಆಹಾರ ಸೇವನೆ ಮತ್ತು ವ್ಯಾಯಾಮ ಅನಿವಾರ್ಯ. ಆದರೆ ಸರಿಯಾದ ಸಮಯದಲ್ಲಿ ಇವನ್ನೆಲ್ಲ ಮಾಡಬೇಕು. ಸಂಜೆ 5-7 ಗಂಟೆಯೊಳಗೆ ಆರೋಗ್ಯಕರ ಮತ್ತು ಲಘುವಾದ ಊಟವನ್ನು ಸೇವಿಸಿದರೆ ಅದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ತೂಕ ನಷ್ಟದಲ್ಲಿ ರಾತ್ರಿಯ ಊಟದ ಸಮಯ ಬಹಳ ಮುಖ್ಯವಾಗಿದೆ. ಸಂಜೆ 5 ರಿಂದ 7 ಗಂಟೆಯೊಳಗೆ ರಾತ್ರಿಯ ಊಟ ಮಾಡುವುದರಿಂದ ತೂಕವನ್ನು ನಿಯಂತ್ರಿಸಬಹುದು. ಈ ಸಮಯದಲ್ಲಿ ಆಹಾರವನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ.
ರಾತ್ರಿಯ ಊಟವನ್ನು ಜೀರ್ಣಿಸಿಕೊಳ್ಳಲು ಮತ್ತು ಅದರಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಜೀರ್ಣಾಂಗ ವ್ಯವಸ್ಥೆಗೆ ಕನಿಷ್ಠ 2-3 ಗಂಟೆಗಳ ಅಗತ್ಯವಿದೆ. ಆದರೆ ತಡರಾತ್ರಿಯಲ್ಲಿ ಊಟ ಮಾಡಿ ತಕ್ಷಣ ಮಲಗುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಾಕಷ್ಟು ಸಮಯ ಸಿಗುವುದಿಲ್ಲ. ಇದರಿಂದಾಗಿ ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ತೊಂದರೆಯಾಗುತ್ತದೆ.
ರಾತ್ರಿ ಊಟವನ್ನು ಬೇಗನೆ ಮಾಡುವುದರಿಂದ ಆಹಾರವನ್ನು ಜೀರ್ಣಿಸಿಕೊಳ್ಳುವ ಪ್ರಕ್ರಿಯೆಯು ಅಂದರೆ ಚಯಾಪಚಯವು ಹೆಚ್ಚಾಗುತ್ತದೆ. ದೇಹವು ಆಹಾರದಿಂದ ಸಂಪೂರ್ಣ ಪೋಷಣೆಯನ್ನು ಪಡೆಯುತ್ತದೆ ಮತ್ತು ಉತ್ತಮ ಶಕ್ತಿಯನ್ನೂ ಪಡೆಯುತ್ತದೆ. ಇದು ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುವಲ್ಲಿ ಸಹಾಯ ಮಾಡುತ್ತದೆ. ಈ ಮೂಲಕ ತೂಕವನ್ನು ಕೂಡ ನಿಯಂತ್ರಿಸಬಹುದು.
ಸಂಜೆ ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದರಿಂದ ಹೊಟ್ಟೆ ತುಂಬಿರುತ್ತದೆ ಮತ್ತು ರಾತ್ರಿಯಲ್ಲಿ ಮತ್ತೆ ಮತ್ತೆ ಹಸಿವಾಗುವುದಿಲ್ಲ. ಆಹಾರವು ಚೆನ್ನಾಗಿ ಜೀರ್ಣವಾದಾಗ ನಿದ್ರಿಸುವುದು ಸುಲಭವಾಗುತ್ತದೆ. ತಡರಾತ್ರಿಯಲ್ಲಿ ಆಹಾರವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುತ್ತದೆ, ಇದು ನಿದ್ರೆಯನ್ನು ಹಾಳು ಮಾಡುತ್ತದೆ. ಸಂಜೆ ಬೇಗ ತಿನ್ನುವುದರಿಂದ ಮಲಗುವ ಮುನ್ನ ದೇಹಕ್ಕೆ ಸಾಕಷ್ಟು ಸಮಯ ಸಿಗುತ್ತದೆ.