ಬೆಂಗಳೂರು: ಬಾಕಿ ಬಿಲ್ ಪಾವತಿ ಮಾಡುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಆದರೂ ಈವರೆಗೂ ಬಿಲ್ ಪಾವತಿಯಾಗಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಿಡಿ ಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಂಪಣ್ಣ, ಸರ್ಕಾರದಿಂದ ಇನ್ನೂ 20,000 ಕೋಟಿ ಬಾಕಿ ಬರಬೇಕಿದೆ. ಹಳೇ ಸಮಸ್ಯೆಗಳ ಜೊತೆ ಹೊಸ ಸಮಸ್ಯೆಗಳು ಕೂಡ ಸೇರ್ಪಡೆಯಾಗಿವೆ. ಈಗಾಗಲೇ ಮತ್ತೋರ್ವ ಗುತ್ತಿಗೆದಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದರು.
ಸಣ್ಣ ನೀರಾವರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಇಲಾಖೆಗಳಿಂದ ಬಿಲ್ ಬಾಕಿಯಿದೆ. ತನಿಖೆ ಹೆಸರಲ್ಲಿ ರಾಜ್ಯ ಸರ್ಕಾರ ಬಾಕಿ ಹಣ ತಡೆಹಿಡಿದಿದೆ. ಕೆಲವು ಇಲಾಖೆಗಳಲ್ಲಿ ಶೇ.7ರಷ್ಟು ಮಾತ್ರ ಹಣ ಬಿಡುಗಡೆ ಮಾಡಿದ್ದಾರೆ. ಒಂದು ತಿಂಗಳಲ್ಲಿ ಶೇ.50ರಷ್ಟು ಬಾಕಿ ಬಿಲ್ ಹಣ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.