ಮೈಸೂರು : ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಮಹಿಷಾ ದಸರಾ ಬದಲು ಮೈಸೂರಿನಲ್ಲಿ ಇಂದು ಮಹಿಷ ಉತ್ಸವ ನಡೆಯಲಿದ್ದು, ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಮಹಿಷ ದಸರಾ ಆಚರಣೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದು, ಮೈಸೂರು ನಗರದ ಪುರಭವನದ ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಹಿಷ ಉತ್ಸವ ಮತ್ತು ಧಮ್ಮ ದೀಕ್ಷಾ ಸಮಾರಂಭಕ್ಕೆ ಪೊಲೀಸ್ ಇಲಾಖೆ ಕೆಲ ಷರತ್ತು ವಿಧಿಸಿ ಸಮ್ಮತಿ ನೀಡಿದೆ.
ಚಾಮುಂಡಿ ಬೆಟ್ಟ ಸೇರಿ ಮೈಸೂರು ನಗರದ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಪೊಲೀಸ್ ಕಮೀಷನರ್ ರಮೇಶ್.ಬಿ ಆದೇಶಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಅ.12ರಂದು ಮಧ್ಯರಾತ್ರಿ 12 ಗಂಟೆಯಿಂದ ಅ.14ರ ಬೆಳಗ್ಗೆ 06 ಗಂಟೆಯವರೆಗೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆ ಯಾವುದೇ ಸಭೆ-ಸಮಾರಂಭ, ರ‍್ಯಾಲಿ ನಡೆಸುವುದನ್ನು ನಿಷೇಧಿಸಲಾಗಿದೆ.