ನವದೆಹಲಿ: ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ಹಬ್ಬಗಳ ಋತುವಿನಲ್ಲಿ ಕೊಂಚ ನೆಮ್ಮದಿಯ ಸುದ್ದಿ ಸಿಕ್ಕಿದೆ. ಕಳೆದ ಒಂದು ತಿಂಗಳಿನಿಂದ ವಿವಿಧ ಬೇಳೆ ಕಾಳುಗಳು ಮತ್ತು ತರಕಾರಿ ಬೆಲೆಯಲ್ಲಿ ಅಲ್ಪ ಇಳಿಕೆ ಆಗಿದೆ.
ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿದ್ದು, ಆಮದು ಹೆಚ್ಚಾಗಿದೆ. ಕೇಂದ್ರ ಸರ್ಕಾರ ಕೈಗೊಂಡ ವಿವಿಧ ಕ್ರಮಗಳಿಂದ ಬೇಳೆ ಕಾಳುಗಳ ಬೆಲೆ ನಿಯಂತ್ರಣಕ್ಕೆ ಬಂದಿದೆ. ಒಂದು ತಿಂಗಳಲ್ಲಿ ಬೇಳೆಕಾಳುಗಳ ದರ ಶೇಕಡ 4ರಷ್ಟು ಕಡಿಮೆಯಾಗಿದೆ ಎಂದು ಭಾರತೀಯ ಬೆಳೆ ಕಾಳುಗಳು ಮತ್ತು ಧಾನ್ಯಗಳ ಸಂಘ ಮಾಹಿತಿ ನೀಡಿದೆ.
ಆಫ್ರಿಕಾದಿಂದ ತೊಗರಿ ಬೇಳೆ ಆಮದು ಹೆಚ್ಚಾಗುವ ಸಾಧ್ಯತೆಯಿದ್ದು, ಬೆಳೆಕಾಳುಗಳ ಬೇಡಿಕೆ ಕಡಿಮೆಯಾಗುವ ನಿರೀಕ್ಷೆ ಇದೆ. ಉದ್ದಿನ ಬೇಳೆ ದರ ಒಂದು ತಿಂಗಳ ಅವಧಿಯಲ್ಲಿ ಶೇಕಡ 2ಕ್ಕಿಂತ ಹೆಚ್ಚು ಕಡಿಮೆಯಾಗಿದೆ. ನಾಫೆಡ್ ಮೂಲಕ ಸರ್ಕಾರ ರಿಯಾಯಿತಿ ದರದಲ್ಲಿ ಬೇಳೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಬೇಳೆ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ.
ತರಕಾರಿ ಬೆಲೆ ಕೂಡ ಕಡಿಮೆಯಾಗಿದೆ. ಜುಲೈನಲ್ಲಿ ಪ್ರತಿ ಕೆಜಿಗೆ 150ರೂ. ದಾಟಿದ್ದ ಟೊಮೆಟೊ ದರ ಮಾರುಕಟ್ಟೆಯಲ್ಲಿ 10-20 ರೂ.ಗೆ ಮಾರಾಟವಾಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 4-6 ರೂ. ಇದೆ. ಉಳಿದ ತರಕಾರಿಗಳ ಬೆಲೆಯಲ್ಲೂ ಇಳಿಕೆ ಕಂಡು ಬಂದಿದೆ.