ಬೆಂಗಳೂರು: ದೇಸಿ ಹಾಗೂ ಐತಿಹಾಸಿಕ ಕಂಬಳ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ಅರಮನೆ ಮೈದಾನದಲ್ಲಿ ಬೆಂಗಳೂರು ಕಂಬಳ- ನಮ್ಮ ಕಂಬಳ ಕರ ಪೂಜೆ ನೆರವೇರಿಸಿ ಮಾತನಾಡಿದ ಡಿಸಿಎಂ, ಈ ಹಿಂದಿನಂತೆ 20 ಕಂಬಳಗಳಿಗೆ ತಲಾ 5 ಲಕ್ಷದಂತೆ 1 ಕೋಟಿ ಸಹಾಯಧನವನ್ನು ನೀಡಲಾಗುವುದು ಎಂದು ಹೇಳಿದರು.
ಕಂಬಳಕ್ಕೆ ಸಹಾಯಧನ ಬಿಡುಗಡೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಜತೆ ಚರ್ಚೆ ನಡೆಸಲಾಗುವುದು. ಕರ್ನಾಟಕದ ಕರಾವಳಿ ಭಾಗ ಈ ದೇಶದ ದೊಡ್ಡ ಆಸ್ತಿ. ದಕ್ಷಿಣ ಕನ್ನಡ ಶ್ರೀಮಂತ ಜನಪದ ಆಚರಣೆಗಳನ್ನು ಹೊಂದಿದೆ. ದಕ್ಷಿಣ ಕನ್ನಡದ ಆಚರಣೆ ಬೆಂಗಳೂರಿನಲ್ಲೂ ನಡೆಯಬೇಕು. ಅಲ್ಲಿನ ಐತಿಹಾಸಿಕ ಕಂಬಳ ಕ್ರೀಡೆ ಬೆಂಗಳೂರಿಗರಿಗೂ ಪರಿಚಯಿಸುತ್ತಿರುವುದು ಶ್ಲಾಘನೀಯ. ಕಂಬಳಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ ಎಂದರು.