alex Certify ಅಕ್ರಮ- ಸಕ್ರಮ `ಬಗರ್ ಹುಕುಂ’ ಸಾಗುವಳಿದಾರರಿಗೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ರಮ- ಸಕ್ರಮ `ಬಗರ್ ಹುಕುಂ’ ಸಾಗುವಳಿದಾರರಿಗೆ ಗುಡ್ ನ್ಯೂಸ್

ಚಿತ್ರದುರ್ಗ : ಅಕ್ರಮ ಸಕ್ರಮ ಬಗರ್ ಹುಕುಂ ಯೋಜನೆಯಡಿ ಜಿಲ್ಲೆಯಲ್ಲಿ ಸಲ್ಲಿಕೆಯಾಗಿರುವ 41580 ಅರ್ಜಿಗಳನ್ನು ಒಂದು ವರ್ಷದೊಳಗೆ ವಿಲೇವಾರಿ ಮಾಡಿ, ಅರ್ಹ ರೈತರಿಗೆ ಸಾಗುವಳಿ ಚೀಟಿ ನೀಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದÀರು.

ಅಕ್ರಮ ಸಕ್ರಮ ಬಗರ್ ಹುಕುಂ ಯೋಜನೆಯಡಿ ಸಾಗುವಳಿ ಚೀಟಿ ನೀಡುವಂತೆ ಚಿತ್ರದುರ್ಗದಲ್ಲಿ ಸುಮಾರು 41,580 ಅರ್ಜಿಗಳು ಸಲ್ಲಿಕೆಯಾಗಿದೆ. ಈ ಅರ್ಜಿಗಳನ್ನು ಮುಂದಿನ ಒಂದು ವರ್ಷದಲ್ಲಿ ವಿಲೇವಾರಿಗೊಳಿಸಬೇಕು.  ಅರ್ಜಿ ಸಲ್ಲಿಸಿದವರಲ್ಲಿ, ಸಾಗುವಳಿಯೇ ಮಾಡಿದವರು ಕೂಡ ಇರುವ ಸಾಧ್ಯತೆಗಳಿದ್ದು, ಪರಿಶೀಲನೆ ನಡೆಸಬೇಕು, ಸಮಗ್ರವಾಗಿ ಪರಿಶೀಲಿಸಿ, ಅರ್ಹರಿಗೆ ಸಾಗುವಳಿ ಚೀಟಿ ನೀಡಬೇಕು.  ನಮೂನೆ 50, 53, 57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಸಾವಿರಾರು ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಅರ್ಜಿಗಳು ವಿಲೇವಾರಿಯಾಗದ ಕಾರಣ ರೈತರು ದಿನಂಪ್ರತಿ ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಿದೆ. ಜನರನ್ನು ಹೀಗೆ ಅಲೆಸುವುದು ಸರಿಯಲ್ಲ. ಜನ ಭರವಸೆ ಇಟ್ಟು ಬದಲಾವಣೆ ನಿರೀಕ್ಷೆಯಿಂದ ಹೊಸ ಸರ್ಕಾರ ತಂದಿದ್ದಾರೆ. ಸುಧಾರಣೆ ಕಾರ್ಯರೂಪಕ್ಕೆ ಬರದಿದ್ದರೆ ಪ್ರಜಾಪ್ರಭುತ್ವದ ಆಶಯವೇ ವ್ಯರ್ಥ. ಹೀಗಾಗಿ ಸರ್ಕಾರವೂ ಬಡ ಜನರ ಪರ ಕೆಲಸ ಮಾಡಲು ಬದ್ಧವಾಗಿದೆ. ಆದರೆ, ಸರ್ಕಾರದ ದ್ಯೇಯೋದ್ದೇಶ ಈಡೇರಲು ಅಧಿಕಾರಿಗಳ ಸಹಕಾರ ಮುಖ್ಯ. ಹೀಗಾಗಿ ಮುಂದಿನ ಒಂದು ವರ್ಷದಲ್ಲಿ ಬಗರ್ ಹುಕುಂ ಅರ್ಜಿಗಳನ್ನು ವಿಲೇಗೊಳಿಸಿ. ಅರ್ಹರಿಗೆ ಸಾಗುವಳಿ ಚೀಟಿ ನೀಡಬೇಕು.  ಅಧಿಕಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ “ಬಗರ್ ಹುಕುಂ ಆ್ಯಪ್” ಅಭಿವೃದ್ಧಿಪಡಿಸುತ್ತಿದ್ದು ಇದರ ಸಹಾಯದಿಂದ ಸ್ಯಾಟಲೈಟ್ ಇಮೇಜ್ ಪಡೆದು ನೈಜ ಸಾಗುವಳಿದಾರರನ್ನು ಗುರುತಿಸಬಹುದು. ಅಲ್ಲದೆ, ಇ-ಸಾಗುವಳಿ ಚೀಟಿಯನ್ನೂ ನೀಡಬಹುದು” ಎಂದರು.

ಸರ್ಕಾರಿ ಆಸ್ತಿಗಳ ರಕ್ಷಣೆಗೆ ಕ್ರಮ: ರಾಜ್ಯದಲ್ಲಿನ ಸರ್ಕಾರಿ ಆಸ್ತಿಗಳ ರಕ್ಷಣೆಗೆ ಕ್ರಮವಹಿಸಲಾಗಿದ್ದು, ಸರ್ಕಾರಿ ಆಸ್ತಿ ದಾಖಲೆನಗಳನ್ನು ನಮೂದಿಸಲು ಆಪ್ ಅಭಿವೃದ್ಧಿ ಪಡಿಸಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಮೂಲ ನೋಂದಣಿ ಸಂಖ್ಯೆ ಆಧರಿಸಿ, ಸರ್ಕಾರಿ ಆಸ್ತಿಗಳ ನೊಂದಣಿ ಆಸ್ತಿ ಮಾಡಲಾಗುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ 2023ರ ಸೆಪ್ಟೆಂಬರ್ ಆರಂಭದಲ್ಲಿ 4447 ಸರ್ಕಾರಿ ಆಸ್ತಿಗಳ ಪ್ಲಾಗಿಂಗ್ ಮಾಡಲಾಗಿದೆ. ಸೆಪ್ಟೆಂಬರ್‍ನಿಂದ ಅಕ್ಟೋಬರ್ ಆರಂಭದವರೆಗೆ ಜಿಲ್ಲೆಯಲ್ಲಿ 3326 ಸರ್ಕಾರಿ ಆಸ್ತಿಗಳ ಪ್ಲಾಗಿಂಗ್ ಮಾಡಲಾಗಿದೆ. ಈ ಆಸ್ತಿಗಳನ್ನು ಒತ್ತುವರಿಯಾಗದಂತೆ ತಡೆಯಲು ಮೂರು ತಿಂಗಳಿಗೊಮ್ಮೆ ಆಸ್ತಿಗಳ ಜಾಗಕ್ಕೆ ಗ್ರಾಮ ಲೆಕ್ಕಾಧಿಕಾರಿಗಳು ಖುದ್ದು ಭೇಟಿ ನೀಡಿ, ಒತ್ತುವರಿಯಾಗದಿರುವುದನ್ನು ದೃಢೀಕರಿಸಿಕೊಂಡು ಜಿಪಿಎಸ್ ಮೂಲಕ ಪ್ರಾಮಾಣಿಕರಿಸಬೇಕು ಎಂದು ತಿಳಿಸಿದರು.

ಶೀಘ್ರ ಬೆಳೆ ಸಮೀಕ್ಷೆ ನಡೆಸಿ,  ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಿ: ಜಿಲ್ಲೆಯ ಆರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಹೀಗಾಗಿ ಅಧಿಕಾರಿಗಳು ಮುಂದಿನ ಒಂದು ವಾರದಲ್ಲಿ ಬೆಳೆ ಸಮೀಕ್ಷೆ ನಡೆಸಿ ಸಂಪೂರ್ಣ ಮಾಹಿತಿಯನ್ನು “ಫ್ರೂಟ್ಸ್ ತಂತ್ರಾಂಶ”ದಲ್ಲಿ ನಮೂದಿಸಿದರೆ ಮಾತ್ರ ರೈತರಿಗೆ ಬೆಳೆ ನಷ್ಟ ತುಂಬಿಕೊಡಲು ಸಾಧ್ಯ. ಆ ನಿಟ್ಟಿನಲ್ಲಿ ಅಧಿಕಾರಿಗಳು ಶೀಘ್ರದಲ್ಲಿ ಬೆಳೆ ಸಮೀಕ್ಷೆ ನಡೆಸಿದ ಅಂಕಿ ಅಂಶಗಳನ್ನು ತಂತ್ರಾಂಶದಲ್ಲಿ ನಮೂದಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.

 “ರಾಜ್ಯದ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಕೇಂದ್ರ ಅಧ್ಯಯನ ತಂಡವೂ ರಾಜ್ಯಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.

ಆದರೆ, ತಹಶೀಲ್ದಾರ್, ಗ್ರಾಮ ಲೆಕ್ಕಿಗರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರತಿ ರೈತನ ಬೆಳೆ ಸಮೀಕ್ಷೆ ನಡೆಸಿ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಬೇಕು. ಆಗ ಮಾತ್ರ ರೈತರಿಗೆ ನ್ಯಾಯಯುತ ಬೆಳೆ ನಷ್ಟ ಪರಿಹಾರ ನೀಡುವುದು ಸಾಧ್ಯ. ಹೀಗಾಗಿ ಅಧಿಕಾರಿಗಳು ತ್ವರಿತಗತಿಯಲ್ಲಿ ಬೆಳೆ ಸಮೀಕ್ಷೆ ನಡೆಸಬೇಕು” ಎಂದು ತಿಳಿಸಿದರು.

ಅಲ್ಲದೆ, “ಬೆಳೆ ನಷ್ಟಕ್ಕೆ ರೈತರಿಗೆ 5 ಎಕರೆವರೆಗೆ ಪರಿಹಾರ ಸಿಗಲಿದೆ. ಒಮ್ಮೆ ಬೆಳೆ ಸಮೀಕ್ಷೆ ಮುಗಿಸಿದ ನಂತರ ಬಿಟ್ಟುಹೋದ ರೈತರ ಹೆಸರನ್ನು ಮತ್ತೆ ಪರಿಹಾರದ ಪಟ್ಟಿಗೆ ಸೇರಿಸುವುದು ಅಸಾಧ್ಯ. ಅಲ್ಲದೆ, ನಗದಿನ ಮೂಲಕವೂ ಪರಿಹಾರ ನೀಡಿಕೆಗೆ ಅವಕಾಶ ಇಲ್ಲ. ಪರಿಹಾರದ ಹಣ ಬ್ಯಾಂಕ್ ಖಾತೆಗೆ ಸಂದಾಯವಾಗಲಿ. ಹೀಗಾಗಿ ಅಧಿಕಾರಿಗಳು ಈಗಲೇ ಬೆಳೆ ಸಮೀಕ್ಷೆಯನ್ನು ಶೇ.100ರಷ್ಟು ದಕ್ಷತೆಯಿಂದ ಮುಗಿಸಬೇಕು. ಬೆಳೆ ಸಮೀಕ್ಷೆಯಿಂದ ಮಾತ್ರ ರೈತರಿಗೆ ಪರಿಹಾರ ನೀಡಲು ಸಾಧ್ಯ” ಎಂದು ಸಚಿವರು ತಾಕೀತು ಮಾಡಿದರು.

ಡಿಸೆಂಬರ್ ಅಂತ್ಯದೊಳಗೆ 263 ಕಂದಾಯ ಗ್ರಾಮ ಘೋಷಣೆ: ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದರು, ಹೀಗಾಗಿ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವುಮಾಡಿಕೊಡಲಾಗಿತ್ತು. ಚಿತ್ರದುರ್ಗದಲ್ಲೂ 263 ಕಂದಾಯೇತರ ಜನವಸತಿ ಪ್ರದೇಶಗಳ ಪೈಕಿ 151 ಪ್ರದೇಶಗಳನ್ನು ಕಂದಾಯ ಗ್ರಾಮಗಳು ಎಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಉಳಿದ ಗ್ರಾಮಗಳಿಗೆ ಏಕೆ ಅಧಿಸೂಚನೆ ಹೊರಡಿಸಿಲ್ಲ? ಹಲವು ಕಡೆಗಳಲ್ಲಿ ಕಂದಾಯ ಗ್ರಾಮವೇ ಘೋಷಿಸದೆ ಹೇಗೆ ಹಕ್ಕು ಪತ್ರ ನೀಡಿದಿರಿ? ಎಂದು ಪ್ರಶ್ನೆಸಿದ ಸಚಿವರು, ಶೀಘ್ರದಲ್ಲೇ ಅರ್ಹ ಕಂದಾಯೇತರ ಜನವಸತಿ ಪ್ರದೇಶಗಳನ್ನು ಗುರುತಿಸಿ ಕಂದಾಯ ಗ್ರಾಮ ಎಂದು ಅಧಿಸೂಚನೆ ಹೊರಡಿಸಿ. ಬಡವರಿಗೆ ಆದಷ್ಟು ಶೀಘ್ರದಲ್ಲಿ ಹಕ್ಕುಪತ್ರ ವಿತರಿಸಿ” ಎಂದು ಸೂಚಿಸಿದರು.

ಪಿಟಿಸಿಎಲ್ ಕಾಯ್ದೆ ಎಚ್ಚರಿಕೆ ಇರಲಿ: ಬಹುನಿರೀಕ್ಷಿತ ಪಿಟಿಸಿಎಲ್ ಕಾಯ್ದೆಗೆ ಸಂಬಂಧಿಸಿದಂತೆ ಸರ್ಕಾರ ತಿದ್ದುಪಡಿ ವಿಧೇಯಕ ಮಂಡಿಸಿ ಅಂಗೀಕಾರ ಪಡೆದಿದೆ. ಹೀಗಾಗಿ ಪಿಟಿಸಿಎಲ್ ಕಾಯ್ದೆಯ ಅಡಿಯಲ್ಲಿ ಮಂಜೂರಾದ ಭೂಮಿಯನ್ನು  ಸರ್ಕಾರದ ಅನುಮತಿ ಇಲ್ಲದೆ ಮಾರಾಟ ಮಾಡುವಂತಿಲ್ಲ.

ಇದರ ಬಗ್ಗೆ ಮಾಹಿತಿ ಇಲ್ಲದ ಕೆಲವು ಅಮಾಯಕರು ಭೂ ಮಾರಾಟಕ್ಕೆ ಮುಂದಾಗಬಹುದು. ಅಥವಾ ಪಿಟಿಸಿಎಲ್ ಭೂಮಿಯನ್ನು ಖರೀದಿ ಮಾಡುವವರೂ ಸಹ ಮೋಸಕ್ಕೊಳಗಾಗುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಪ್ರಕರಣದ ಬಗ್ಗೆ ಅಧಿಕಾರಿಗಳು ಎಚ್ಚರಿಕೆವಹಿಸಬೇಕು ಎಂದು ಸಚಿವರು ತಾಕೀತು ಮಾಡಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...