ನವರಾತ್ರಿ ಹಬ್ಬಕ್ಕೆ ಚಿನ್ನ ಕೊಂಡುಕೊಳ್ಳಬೇಕು ಎಂದು ನಿರ್ಧರಿಸಿದ್ದವರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ಸಂಘರ್ಷವು ಭಾರತದಲ್ಲಿ ಚಿನ್ನದ ಮೇಲೆ ಪರಿಣಾಮ ಬೀರಲಿದೆ. ಇಸ್ರೇಲ್ – ಹಮಾಸ್ ಉಗ್ರರ ನಡುವಿನ ಯುದ್ಧದಿಂದಾಗಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
ವಾರಾಂತ್ಯದಲ್ಲಿ ಇಸ್ರೇಲ್ ಮೇಲೆ ಪ್ಯಾಲೆಸ್ತೀನ್ ಗುಂಪು ಹಮಾಸ್ ನಡೆಸಿದ ದಾಳಿಯ ನಂತರ ಭಾರತದಲ್ಲಿ ಚಿನ್ನದ ಬೆಲೆ ಈಗಾಗಲೇ ಪ್ರತಿ 10 ಗ್ರಾಂಗೆ 874 ರೂಪಾಯಿಗಳಷ್ಟು ಏರಿಕೆಯಾಗಿದ್ದು, 10 ಗ್ರಾಂಗೆ 57,415 ರೂ. ತಲುಪಿದೆ. ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಹೆಚ್ಚಾದರೆ ಪ್ರತಿ 10 ಗ್ರಾಂಗೆ 2,500-3,000 ರೂ.ಗಳಷ್ಟು ಬೆಲೆಗಳು ಹೆಚ್ಚಾಗಬಹುದು ಎಂದು ಉದ್ಯಮ ಊಹಿಸಿದೆ.
ಚಿನ್ನದ ಬೆಲೆಗಳ ಏರಿಕೆಯಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಹಬ್ಬದ ಋತುವಿನಲ್ಲಿ ಹಳೆಯ ಚಿನ್ನದ ವಿನಿಮಯವು 15% ವರೆಗೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಸೋನ್ ಕೋ ಗೋಲ್ಡ್ ಮತ್ತು ಡೈಮಂಡ್ಸ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುವಾಂಕರ್ ಸೇನ್ ಹೇಳಿದ್ದಾರೆ.
ಹಳೆಯ ಚಿನ್ನದ ವಿನಿಮಯವು ಕಂಪನಿಯ ವ್ಯಾಪಾರದಲ್ಲಿ ನಗರ ಪ್ರದೇಶದಲ್ಲಿ 25-30% ಮತ್ತು ಗ್ರಾಮೀಣ ಪ್ರದೇಶದಲ್ಲಿ 30-35% ಆಗಿದೆ ಎಂದು ಸುವಾಂಕರ್ ಸೇನ್ ತಿಳಿಸಿದ್ದಾರೆ.
ತನಿಷ್ಕ್ ನ ಸಿಇಒ ಅಜೋಯ್ ಚಾವಲ್ ತಮ್ಮ ಚಿನ್ನದ ವಿನಿಮಯ ವ್ಯವಹಾರವು ಈಗಾಗಲೇ ಒಟ್ಟು ವ್ಯವಹಾರದ 41% ರಷ್ಟಿದೆ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಅದನ್ನು 45% ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಬಹಿರಂಗಪಡಿಸಿದ್ದಾರೆ. ಈ ತಂತ್ರವು ಚಿನ್ನದ ಆಮದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅದೇ ರೀತಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ತಮ್ಮ ಚಿನ್ನದ ವಿನಿಮಯ ಕಾರ್ಯಕ್ರಮವು ಹಿಂದಿನ ಆರ್ಥಿಕ ವರ್ಷದಲ್ಲಿ ತಮ್ಮ ಒಟ್ಟು ಮಾರಾಟದ 36% ರಷ್ಟು ಕೊಡುಗೆಯನ್ನು ನೀಡಿದೆ ಎಂದು ವರದಿ ಮಾಡಿದೆ .
ಜಾಗತಿಕ ಹಣದುಬ್ಬರ ಪ್ರವೃತ್ತಿಗಳು ಮತ್ತು ಭೌಗೋಳಿಕ ರಾಜಕೀಯ ಬೆಳವಣಿಗೆಗಳಿಂದ ಚಿನ್ನದ ಬೆಲೆಗಳು ಹೆಚ್ಚಾಗಿ ಪ್ರಭಾವಿತವಾಗಿವೆ. ಎಲ್‌ಕೆಪಿ ಸೆಕ್ಯುರಿಟೀಸ್‌ನ ವಿಪಿ ಸಂಶೋಧನಾ ವಿಶ್ಲೇಷಕ ಜತೀನ್ ತ್ರಿವೇದಿ, ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಒತ್ತಡವು ಜಾಗತಿಕವಾಗಿ ಈಕ್ವಿಟಿಗಳಂತಹ ಆಸ್ತಿಗಳ ಮೇಲೆ ಒತ್ತಡವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ವಿವರಿಸಿದರು. ಪರಿಣಾಮವಾಗಿ ಈಕ್ವಿಟಿಗಳಿಂದ ಹೊರಹರಿವಿನ ಒಂದು ಭಾಗವನ್ನು ಚಿನ್ನಕ್ಕೆ ಹಂಚಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.