ಪಂಜಾಬ್ ನ ಜಲಂಧರ್ ಜಿಲ್ಲೆಯ ಮನೆಯೊಂದರಲ್ಲಿ ರೆಫ್ರಿಜರೇಟರ್ ನ ಕಂಪ್ರೆಸರ್ ನಲ್ಲಿ ಸ್ಫೋಟ ಸಂಭವಿಸಿದ ನಂತರ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಸದಸ್ಯರು ಸಾವನ್ನಪ್ಪಿದ್ದಾರೆ.
ಭಾನುವಾರ ರಾತ್ರಿ ಕುಟುಂಬವು ಟಿವಿ ವೀಕ್ಷಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ, ಸ್ಫೋಟದ ನಂತರ ಮನೆಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಮೃತರನ್ನು ಯಶಪಾಲ್ ಘಾಯ್(70), ಅವರ ಮಗ ಇಂದರ್‌ಪಾಲ್ (41), ಸೊಸೆ ರುಚಿ ಘಾಯ್(40), ಮೊಮ್ಮಕ್ಕಳಾದ ಮನ್ಶಾ(14), ದಿಯಾ(12) ಮತ್ತು ಅಕ್ಷಯ್(10) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಇಂದರ್ ಪಾಲ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸೋಮವಾರ ಇಂದರ್‌ಪಾಲ್ ಮೃತರಾಗಿದ್ದಾರೆ. ಕುಟುಂಬದ ಇತರ ಐವರು ಭಾನುವಾರವೇ ಸಾವನ್ನಪ್ಪಿದ್ದರು. ಜಲಂಧರ್‌ನ ವಿಧಿವಿಜ್ಞಾನ ತಜ್ಞರ ತಂಡವು ಸ್ಫೋಟದ ನಿಖರವಾದ ಕಾರಣವನ್ನು ಕಂಡುಹಿಡಿಯಲು ಮಾದರಿಗಳನ್ನು ಸಂಗ್ರಹಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.