ಹೈದರಾಬಾದ್: ಸಿಕ್ಕಿಂನ ತೀಸ್ತಾ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹ ಇದುವರೆಗೆ 42 ಜನರನ್ನು ಬಲಿತೆಗೆದುಕೊಂಡಿದ್ದು, ತೆಲುಗು ನಟಿ ಸರಳಾ ಕುಮಾರಿ ನಾಪತ್ತೆಯಾಗಿದ್ದಾರೆ ಎಂದು ಯುಎಸ್‌ನಲ್ಲಿ ನೆಲೆಸಿರುವ ಅವರ ಪುತ್ರಿ ನಬಿತಾ ಶನಿವಾರ ತಿಳಿಸಿದ್ದಾರೆ.
ಪ್ರವಾಹದಿಂದ ತತ್ತರಿಸಿರುವ ಈಶಾನ್ಯ ರಾಜ್ಯದಲ್ಲಿ ಕಾಣೆಯಾಗಿರುವ ತನ್ನ ತಾಯಿಯನ್ನು ಪತ್ತೆ ಹಚ್ಚಲು ಸಹಾಯ ಮಾಡುವಂತೆ ನಬಿತಾ ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸರಳಾ ಕುಮಾರಿ ಅವರು 1983 ರಲ್ಲಿ ಮಿಸ್ ಆಂಧ್ರಪ್ರದೇಶ ಕಿರೀಟವನ್ನು ಪಡೆದ ನಂತರ ತೆಲುಗು ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು. ಅವರು ಎನ್ಟಿಆರ್-ನಟಿಸಿದ ‘ದಾನ ವೀರ ಶೂರ ಕರ್ಣ’ ಮತ್ತು ‘ಸಂಘರ್ಷಣ’ ದಂತಹ ಚಿತ್ರಗಳಲ್ಲಿ ನಟಿಸಿದ್ದಾರೆ.
ಹೈದರಾಬಾದ್‌ನ ಹೈಟೆಕ್ ನಗರದ ನಿವಾಸಿಯಾದ ಅವರು ಅಕ್ಟೋಬರ್ 2 ರಂದು ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ನಬಿತಾ ತನ್ನ ತಾಯಿಯ ಬಗ್ಗೆ ಆತಂಕಕ್ಕೊಳಗಾಗಿದ್ದಾರೆ. ರಾಜ್ಯ ಸರ್ಕಾರದಿಂದ ನೆರವು ಕೋರಿದ್ದಾರೆ. ತನ್ನ ತಾಯಿಯ ಸಿಕ್ಕಿಂ ಪ್ರವಾಸದ ಬಗ್ಗೆ ತನಗೆ ತಿಳಿದಿತ್ತು ಮತ್ತು ಅಕ್ಟೋಬರ್ 3 ರಿಂದ ಆಕೆಯೊಂದಿಗೆ ಸಂಪರ್ಕ ಕಳೆದುಕೊಂಡಿದ್ದಾಗಿ ಹೇಳಿದ್ದಾರೆ.