ಬೀದರ್: ಅಪ್ರಾಪ್ತ ಬಾಲಕಿ ಅಸಹಜವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ ಐ ಓರ್ವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ ಘಟನೆ ನಡೆದಿದೆ.
ಬೀದರ್ ಜಿಲ್ಲೆಯ ಬೆಮಳಖೇಡ ಠಾಣೆಯ ಪಿಎಸ್ ಐ ರಾಚಯ್ಯ ಮಠಪತಿ ಅಮಾನತುಗೊಂಡವರು. ಅಪ್ರಾಪ್ತ ಬಾಲಕಿ ಅಸಹಜವಾಗಿ ಸಾವನ್ನಪ್ಪಿರುವ ಬಗ್ಗೆ ಬಾಲಕಿ ಕುಟುಂಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ದೂರು ಸ್ವಿಕರಿಸಿ, ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸದೇ ಪಿಎಸ್ ಐ ಮಠಪತಿ ನಿರ್ಲಕ್ಷ್ಯ ಮೆರೆದಿದ್ದರು.
ಈ ಹಿನ್ನೆಲೆಯಲ್ಲಿ ಡಿವೈ ಎಸ್ ಪಿ, ರಾಚಯ್ಯ ಮಠಪತಿ ವಿರುದ್ಧ ವರದಿ ನೀಡಿದ್ದರು. ಬಾಲಕಿ ಸಾವಿನ ಬಗ್ಗೆ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಪಿಎಸ್ ಐ ಮಠಪತಿಯನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ತಿಳಿಸಿದ್ದಾರೆ.
ಆಗಸ್ಟ್ 17ರಂದು ಬಾಲಕಿ ಸಾವನ್ನಪ್ಪಿದ್ದು, ಯುವಕನ ಕಿರುಕುಳದಿಂದ ಮಗಳು ಸಾವನ್ನಪ್ಪಿದ್ದಾಗಿ ಆಕೆ ಪೋಷಕರು ಆರೋಪಿಸಿದ್ದರು. ದೂರು ನೀಡಲು ಬಂದರೂ ದೂರು ತೆಗೆದುಕೊಳ್ಳದೇ ಪಿಎಸ್ ಐ ನಿರ್ಲಕ್ಷ್ಯ ವಹಿಸಿದ್ದರು. ಅ.4ರಂದು ಬಾಲಕಿಯ ಶವ ಹೂತಿದ್ದ ಜಾಗದಿಂದ ತೆಗೆದು ಪರೀಕ್ಷೆ ನಡೆಸಲಾಗಿತ್ತು. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.