ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಹಿಂದಿ ಹೇರಲಾಗುತ್ತಿದೆ ಎಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ‘ನಮ್ಮ ಮೆಟ್ರೋ’ ದಲ್ಲಿ ಇಂಗ್ಲೀಷ್ ಹಾಗೂ ಹಿಂದಿ ಭಾಷೆಗೆ ಆದ್ಯತೆ ನೀಡಲಾಗಿತ್ತು.
ಕನ್ನಡಪರ ಹೋರಾಟಗಾರರು ಈ ಕುರಿತಂತೆ ಪ್ರತಿಭಟನೆ ನಡೆಸಿದ ಬಳಿಕ ‘ನಮ್ಮ ಮೆಟ್ರೋ’ ದಲ್ಲಿ ಹಿಂದಿ ಫಲಕಗಳನ್ನು ಕೈ ಬಿಡಲಾಗಿತ್ತು. ಆದರೆ ಅಚ್ಚರಿಯ ಸಂಗತಿ ಎಂದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲೆಕ್ಟ್ರಿಕ್ ಬಸ್ ಗಳಲ್ಲೂ ಹಿಂದಿ ಭಾಷೆಗೆ ಪ್ರಾಧ್ಯಾನತೆ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಬಸ್ ನಲ್ಲಿ ಪ್ರಯಾಣಿಸಿದ ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಫೋಟೋ ಸಮೇತ ವಿಷಯ ಹಂಚಿಕೊಂಡಿದ್ದು, ತುರ್ತು ಸಂದರ್ಭಗಳಲ್ಲಿ ಬಳಸುವ ಬಾಗಿಲಿನ ಬಗ್ಗೆ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ವಿವರಣೆ ನೀಡಲಾಗಿದೆ ಎಂದು ದೂರಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು, ಇಂಗ್ಲೀಷ್ ಮತ್ತು ಹಿಂದಿ ಅರಿಯದ ಕನ್ನಡ ಮಾತ್ರ ಬಳಸುವ ಪ್ರಯಾಣಿಕರಿಗೆ ಇದು ಹೇಗೆ ಅರ್ಥವಾದೀತು ಎಂಬ ಆಕ್ರೋಶ ವ್ಯಕ್ತವಾಗಿದೆ. ಆದರೆ ಈ ಕುರಿತ ಸತ್ಯಾಸತ್ಯತೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಾತ್ರ ವಿವರಿಸಬೇಕಿದೆ.