ಕೋವಿಡ್ ಸಂದರ್ಭದಲ್ಲಿ ಆರಂಭವಾದ ‘ವರ್ಕ್ ಫ್ರಮ್ ಹೋಂ’ ಪದ್ಧತಿಗೆ ವಿದಾಯ ಹೇಳುವ ಸಾಧ್ಯತೆ ಕಂಡು ಬರುತ್ತಿದೆ. ಈಗಾಗಲೇ ಹಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ‘ಹೈಬ್ರಿಡ್’ ಮಾದರಿ (ವಾರದಲ್ಲಿ 2-3 ದಿನ ಕಚೇರಿಗೆ ಬಂದು ಕೆಲಸ ಮಾಡುವುದು) ಅನುಸರಿಸಲು ಸೂಚಿಸಿದ್ದು, ಕ್ರಮೇಣ ಇದು ಪೂರ್ಣ ಪ್ರಮಾಣದಲ್ಲಿ ಕಚೇರಿಗೆ ಬಂದು ಕೆಲಸ ಮಾಡುವ ವಿಧಾನಕ್ಕೆ ಬದಲಾಗುವ ನಿರೀಕ್ಷೆ ಇದೆ.
ಮನೆಯಿಂದಲೇ ಕೆಲಸ ಮಾಡುವ ಪದ್ಧತಿ ಆರಂಭವಾದ ಬಳಿಕ ಬಹುತೇಕ ಉದ್ಯೋಗಿಗಳು ಅದಕ್ಕೇ ಹೊಂದಿಕೊಂಡಿದ್ದು, ಇದೀಗ ತಮ್ಮ ತಮ್ಮ ಕಂಪನಿಗಳು ಕಚೇರಿಗೆ ಬಂದು ಕೆಲಸ ಮಾಡಲು ಸೂಚಿಸುತ್ತಿರುವ ಕಾರಣ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದಾರೆ. ಈಗಾಗಲೇ ಹಲವು ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಾರದಲ್ಲಿ ಎರಡರಿಂದ ಮೂರು ದಿನ ಕಚೇರಿಗೆ ಬಂದು ಕೆಲಸ ಮಾಡುವಂತೆ ಇ-ಮೇಲ್ ಸಂದೇಶ ಕಳುಹಿಸಿವೆ ಎನ್ನಲಾಗಿದ್ದು, ಅದರಂತೆ ಉದ್ಯೋಗಿಗಳು ಕಚೇರಿಗೆ ತೆರಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ‘ವರ್ಕ್ ಫ್ರಮ್ ಹೋಮ್’ ಗೂ ಕೆಲವರು ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದು, ಕಚೇರಿಗಿಂತ ಹೆಚ್ಚಿನ ಸಮಯ ಇಲ್ಲಿ ದುಡಿಯಬೇಕಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದರು. ‘ವರ್ಕ್ ಫ್ರಂ ಹೋಂ’ ಸಂದರ್ಭದಲ್ಲಿ ಸಮಯದ ಪರಿವೇ ಇಲ್ಲದೆ ನಾವು ಕೆಲಸ ಮಾಡಬೇಕಾದ ಪರಿಸ್ಥಿತಿ ಇದ್ದು, ಕಚೇರಿಗೆ ತೆರಳಿದರೆ ಇದಕ್ಕೆ ವಿರಾಮ ಬೀಳಬಹುದೇನೋ ಎನ್ನುತ್ತಿದ್ದರು. ಇದೀಗ ಮತ್ತೆ ಕಚೇರಿಗೆ ಬರಲು ಐಟಿ ಕಂಪನಿಗಳು ತಿಳಿಸುತ್ತಿರುವ ಕಾರಣ ಈ ವಿಧಾನಕ್ಕೆ ಉದ್ಯೋಗಿಗಳು ಮತ್ತೆ ಎಷ್ಟರಮಟ್ಟಿಗೆ ಹೊಂದಿಕೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.