
ಹೈದರಾಬಾದ್: ಬಿ.ಆರ್.ಎಸ್. ಪಕ್ಷವನ್ನು ಎನ್.ಡಿ.ಎ.ಗೆ ಸೇರ್ಪಡೆ ಮಾಡಲು ತೆಲಂಗಾಣ ಸಿಎಂ ಕೆಸಿಆರ್ ಯತ್ನಿಸಿದ್ದರು. ಇದಕ್ಕಾಗಿ ದೆಹಲಿಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ನನ್ನನ್ನು ಭೇಟಿಯಾಗಿದ್ದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ತೆಲಂಗಾಣದ ನಿಜಾಮಾಬಾದ್ ನಲ್ಲಿ ಮಂಗಳವಾರ ನಡೆದ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ನಂತರ ದೆಹಲಿಯಲ್ಲಿ ತಮ್ಮನ್ನು ಭೇಟಿಯಾಗಲು ಬಂದಾಗ ಕೆ. ಚಂದ್ರಶೇಖರ್ ರಾವ್ ಅವರು ಎನ್‌ಡಿಎ ಸೇರಲು ಬಯಸಿದ್ದರು ಎಂಬ ರಹಸ್ಯ ಬಹಿರಂಗಪಡಿಸಿದ್ದಾರೆ.
ಮತ್ತೊಂದು ಸಭೆಯಲ್ಲಿ, ಕೆಸಿಆರ್ ಅವರು ತಮ್ಮ ಮಗ ಕೆ.ಟಿ.ರಾಮರಾವ್ (ಕೆಟಿಆರ್) ಅವರಿಗೆ ಸರ್ಕಾರದ ಆಳ್ವಿಕೆಯನ್ನು ನೀಡಲು ಬಯಸಿದ್ದರು ಎಂದು ಆರೋಪಿಸಿದರು. ಆದರೆ, ಕೆಟಿಆರ್ ಅವರನ್ನು ಆಯ್ಕೆ ಮಾಡುವುದು ಮತ್ತು ಅವರನ್ನು ಮಂತ್ರಿ, ಮುಖ್ಯಮಂತ್ರಿ ಮಾಡುವುದು ಮತದಾರರಿಗೆ ಬಿಟ್ಟ ವಿಚಾರ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಹೈದರಾಬಾದ್ ಸ್ಥಳೀಯ ಸಂಸ್ಥೆ ಚುನಾವಣೆಯ ನಂತರ ನನ್ನನ್ನು ಭೇಟಿಯಾಗಿದ್ದ ಕೆಸಿಆರ್ ಅವರು ಬಿ.ಆರ್.ಎಸ್. ಪಕ್ಷವನ್ನು ಎನ್.ಡಿ.ಎ.ಗೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದರು. ಆದರೆ, ನಾನು ಕೆಸಿಆರ್ ಮನವಿಯನ್ನು ಒಪ್ಪಲಿಲ್ಲ. ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದಾಗ, ಕೆಸಿಆರ್ ಅವರಿಗೆ ಬೆಂಬಲ ಬೇಕಿತ್ತು. ಈ ಚುನಾವಣೆಯ ಮೊದಲು ಅವರು ನನ್ನನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುತ್ತಿದ್ದರು, ಆದರೆ ನಂತರ ಇದ್ದಕ್ಕಿದ್ದಂತೆ ಅವರು ಹಾಗೆ ಮಾಡುವುದನ್ನು ನಿಲ್ಲಿಸಿದರು ಎಂದು ಹೇಳಿದ್ದಾರೆ.