ಬೆಂಗಳೂರು: ಅಕ್ಟೋಬರ್ 1ರಿಂದ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಜಾರಿಯಾಗಲಿದೆ. ಹಳೇ ದರಗಳಲ್ಲಿ ನಡೆಯುತ್ತಿದ್ದ ನೋಂದಣಿ ಪ್ರಕ್ರಿಯೆ ಶನಿವಾರ ಮಧ್ಯಾಹ್ನ 12 ಗಂಟೆಗೆ ಸ್ಥಗಿತವಾಗಲಿದೆ.
ಹೊಸದಾಗಿ ಸಿದ್ಧಪಡಿಸಿದ ಮಾನದಂಡಗಳ ಆಧಾರದ ಪ್ರಕಾರ ಶೇಕಡ 5 ರಿಂದ ಶೇಕಡ 70ರಷ್ಟರವರೆಗೂ ಸ್ಥಿರಾಸ್ತಿಗಳ ಮೌಲ್ಯದಲ್ಲಿ ಹೆಚ್ಚಳವಾಗುತ್ತಿದೆ. ಹೊಸ ಮಾರ್ಗಸೂಚಿ ದರಕ್ಕೆ ವ್ಯವಸ್ಥೆ ಬದಲಾವಣೆಯಾಗಬೇಕಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ಪೋರ್ಟಲ್ ಸ್ಥಗಿತವಾಗಲಿದೆ. ಅಕ್ಟೋಬರ್ 1ರಂದು ಬೆಳಿಗ್ಗೆ 5 ಗಂಟೆಯಿಂದ ಪೋರ್ಟಲ್ ಮತ್ತೆ ಆರಂಭವಾಗಲಿದೆ. ಈ 17 ಗಂಟೆಗಳ ಅವಧಿಯಲ್ಲಿ ಆಸ್ತಿ ನೋಂದಣಿಯ ಯಾವುದೇ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇರುವುದಿಲ್ಲ.
ಆಸ್ತಿ ನೊಂದಣಿ ಪ್ರಕ್ರಿಯೆಗೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಸಲ್ಲಿಕೆಯಾದ ಅರ್ಜಿಗಳನ್ನು ಉಪನೋಂದಣಾಧಿಕಾರಿ ಪರಿಶೀಲನೆ ಮಾಡಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಮರು ಮೌಲ್ಯಮಾಪನಕ್ಕಾಗಿ ಉಪನೋಂದಣಾಧಿಕಾರಿಗೆ ಹಿಂತಿರುಗಿಸಲಾಗುವುದು. ಹಳೆ ಮಾರ್ಗಸೂಚಿ ದರ ಪಾವತಿಸಿದವರು ಹೊಸ ದರದ ವ್ಯತ್ಯಾಸದ ಶುಲ್ಕ ಮತ್ತೊಮ್ಮೆ ಪಾವತಿಸಬೇಕಿದೆ. ಸೆಪ್ಟೆಂಬರ್ 30ರ ನಂತರ ನೋಂದಾಯಿಸುವ ಯಾವುದೇ ದಸ್ತಾವೇಜುಗಳಿಗೆ ಹೊಸ ಮಾರ್ಗಸೂಚಿ ದರ ಅನ್ವಯವಾಗಲಿದೆ ಎಂದು ಹೇಳಲಾಗಿದೆ.