ಬೆಂಗಳೂರು : ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಇಂದು ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್ ತೀವ್ರಗೊಂಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೋರಾಟಗಾರರು ಪ್ರತಿಭಟನೆಗೆ ಇಳಿದಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಕಾವೇರಿ ನೀರಿಗಾಗಿ ಪ್ರತಿಭಟನೆ ತೀವ್ರಗೊಂಡಿದೆ. ತಮಿಳುನಾಡು ಗಡಿಭಾಗದಲ್ಲಿ ಜಯ ಕರ್ನಾಟಕ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು, ಕೋಲಾರ, ಕೊಪ್ಪಳ, ಚಿಕ್ಕಮಗಳೂರು, ಹುಬ್ಬಳ್ಳಿ, ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದು ಬೆಳಗ್ಗೆ 6 ಗಂಟೆಯಿಂದಲೇ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವಡೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಾಸನದಲ್ಲಿ ನಗರದಲ್ಲಿ ಸಾರಿಗೆ ಬಸ್ ಗಳನ್ನು ತಡೆದು ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಗೆ ಸಾರಿಗೆ ಇಲಾಖೆ ನೈತಿಕ ಬೆಂಬಲ ಸೂಚಿಸಿದ್ರೂ ಇಂದು ಬಸ್ ಸೇವೆ ಇರಲಿದೆ. ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಿನ್ನೆ ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇಂದು ಬೆಂಗಳೂರಿನ ಟೌನ್ ಹಾಲ್ ನಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ.