ಬೆಂಗಳೂರು: ಗ್ರಾಮ ಪಂಚಾಯಿತಿಗಳ ಅಧಿಕಾರವನ್ನು ಬಲಪಡಿಸುವ ಮೂಲಕ ವಿಕೇಂದ್ರಿಕರಣಕ್ಕೆ ಒತ್ತು ನೀಡಲು ಸರ್ಕಾರ ಮುಂದಾಗಿದೆ. 29 ಇಲಾಖೆಗಳ ಅಧಿಕಾರ ಮರು ಸ್ಥಾಪಿಸಿ ಸ್ಥಳೀಯ ಸರ್ಕಾರಗಳಾಗಿ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ.
ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯಲ್ಲಿ ನೀಡಿದ್ದ ಬಹುತೇಕ ಅಧಿಕಾರಗಳು ಈಗ ಗ್ರಾಮ ಪಾಂಚಾಯಿತಿ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇಲ್ಲ. ಹೀಗಾಗಿ ಪಂಚಾಯಿತಿಗಳಿಗೆ ಜವಾಬ್ದಾರಿ ನಕ್ಷೆಯ ಮೂಲಕ 29 ಇಲಾಖೆಗಳ ಅಧಿಕಾರ ಮರುಸ್ಥಾಪನೆ ಮಾಡುವ ಮೂಲಕ ಸ್ಥಳೀಯ ಸರ್ಕಾರಗಳಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.
ಗ್ರಾಮ ಪಂಚಾಯಿತಿಗಳಿಗೆ 29 ಇಲಾಖೆಗಳ ಅಧಿಕಾರ ನೀಡಲು ಸರ್ಕಾರ ಗಡುವು ನಿಗದಿ ಮಾಡಿದೆ. ನ. 26 ಸಂವಿದಾನ ಜಾರಿಗೆ ಬಂದ ದಿನವಾಗಿದ್ದು, ಅದೇ ದಿನ ಜವಾಬ್ದಾರಿ ನಕ್ಷೆ ಗ್ರಾಪಂಗಳಿಗೆ ಜಾರಿಯಾಗಲಿದೆ. ನೈಜ ಅಧಿಕಾರ ವಿಕೇಂದ್ರೀಕರಣ, ಅನುದಾನ, ಜವಾಬ್ದಾರಿ, ಮುನ್ನೋಟದ ಕಲ್ಪನೆಯೊಂದಿಗೆ ಇಲಾಖೆಗಳಿಗೆ ಬಿಡುಗಡೆಯಾಗುವ ಅನುದಾನ ಲಿಂಕ್ ಡಾಕ್ಯುಮೆಂಟ್ ಮೂಲಕ ಗ್ರಾಮಗಳಿಗೆ ನೀಡಲಾಗುವುದು.
ಪಂಚಾಯಿತಿಗಳ ಸಬಲೀಕರಣ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ, ಅರಣ್ಯ, ಶಿಕ್ಷಣ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಿಂದುಳಿದ ವರ್ಗ, ಸಾಮಾಜಿಕ ಭದ್ರತಾ ಪಿಂಚಣಿ, ಜಲ ಸಂಪನ್ಮೂಲ ಸೇರಿದಂತೆ 29 ಇಲಾಖೆಗಳು ತಮ್ಮ ಬಜೆಟ್ ಸಂಬಂಧಿತ ಲಿಂಕ್ ಡಾಕ್ಯುಮೆಂಟ್ ಸಿದ್ಧಪಡಿಸಬೇಕಿದ್ದು, ಅದರ ನಕ್ಷೆ ರಚಿಸಲಾಗುತ್ತಿದೆ. ಆಯಾ ಗ್ರಾಮ ಪಂಚಾಯಿತಿಗಳು ರೂಪಿಸುವ ಯೋಜನೆ ಅನುಷ್ಠಾನ ಮಾಡಲಾಗುತ್ತದೆ.
ಅದರಿಂದ ಆಯಾ ಗ್ರಾಮ ಪಂಚಾಯಿತಿಗಳಿಗೆ ಕಾಮಗಾರಿ ಅನುಷ್ಠಾನ ಮಾಡಲಿದ್ದು, ಒಂದೇ ರೀತಿಯ ಯೋಜನೆ ರೂಪಗೊಂಡು ಲೋಪಗಳನ್ನು ನಿವಾರಿಸಲಾಗುವುದು. ಹೀಗಾಗಿ ಜವಾಬ್ದಾರಿ ನಕ್ಷೆ ಎಂಬ ಹೊಸ ಕಲ್ಪನೆಗೆ ಮುಂದಾಗಿದ್ದು, ಪಂಚಾಯ್ತಿಗಳಿಗೆ ಪೂರ್ಣ ಪ್ರಮಾಣದ ಅಧಿಕಾರ ನೀಡಲು ಕ್ರಮ ಕೈಗೊಳ್ಳಲಾಗಿದೆ.