ಮೈಸೂರು: ಅಮಾಯಕರನ್ನು ವಂಚಿಸಲು ಖದೀಮರು ಏನೇನೆಲ್ಲ ಪ್ಲಾನ್ ಮಾಡ್ತಾರೆ ನೋಡಿ. ಇವರಿಗೆ ಪೊಲೀಸರ ಬಗ್ಗೆಯಾಗಲಿ, ಕಾನೂನಿನ ಬಗ್ಗೆಯಾಗಲಿ ಕಿಂಚಿತ್ತೂ ಭಯವಿಲ್ಲ. ಪೊಲೀಸರ ಹೆಸರು ಹೇಳಿಕೊಂಡು ಮಹಿಳೆಯೊಬ್ಬರಿಗೆ ಕರೆ ಮಾಡಿದ ವಂಚಕರು ಹಣ ದೋಚಿರುವ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.
ಮಹಿಳೆಯೊಬ್ಬರಿಗೆ ಕರೆ ಮಾಡಿದ ವಂಚಕರು, ತಾವು ಮುಂಬೈ ಕ್ರೈಂ ಬ್ರಾಂಚ್ ಪೊಲಿಸರು ಎಂದು ಹೇಳಿದ್ದು, ತಮ್ಮ ಹೆಸರಿಗೆ ಪಾರ್ಸಲ್ ಒಂದು ಬಂದಿದೆ. ಪಾರ್ಸಲ್ ಥಾಯ್ಲೆಂಡ್ ಗೆ ಹೋಗಿದೆ. ಪಾರ್ಸಲ್ ನಲ್ಲಿ ಕೆಲ ಅಕ್ರಮ ವಸ್ತುಗಳಿದ್ದವು. ಯಾವುದೇ ಕಾನೂನು ಸಮಸ್ಯೆ ಎದುರಾಗಬಹುದು. ಹಾಗಾಗಿ ಪಾರ್ಸಲ್ ನ್ನು ನಮ್ಮ ಏಜೆನ್ಸಿಯವರೇ ಪಡೆದುಕೊಳ್ಳುತ್ತಾರೆ ನಿಮಗೆ ಸಹಾಯ ಮಾಡಲು ಪ್ರಕರಣ ಮುಚ್ಚಿ ಹಾಕಲು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ಹೀಗೆ ಕರೆ ಮಾಡಿದ ವಂಚಕರು ಮಹಿಳೆಗೆ 40 ಸಾವಿರ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದಾರೆ. ಅನುಮಾನಗೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಸೆಕ್ಷನ್ 66 (ಡಿ) ಮತ್ತು ಐಪಿಸಿ ಸೆಕ್ಷನ್ 419 ಹಾಗೂ 420 ಅಡಿಯಲ್ಲಿ ಎಫ್ ಐಆರ್ ದಾಖಲಾಗಿದೆ.
ಅಪರಿಚಿತ ವ್ಯಕ್ತಿಗಳಿಂದ ಬರುವ ಇಂತಹ ಯಾವುದೇ ಕರೆಗಳ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು. ಹಣಕ್ಕೆ ಬೇಡಿಕೆ ಇಡುವ ಅಥವಾ ಬೆದರಿಕೆ ಕರೆಗಳು ಬಂದರೆ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.