ನವದೆಹಲಿ: ವಿತ್ತೀಯ ಕೊರತೆ ಸರಿದೂಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2023 -24ರ ಆರ್ಥಿಕ ವರ್ಷ(ಅಕ್ಟೋಬರ್ – ಮಾರ್ಚ್) ಎರಡನೇ ಅವಧಿಯಲ್ಲಿ ಬಾಂಡ್ ವಿತರಣೆಯ ಮೂಲಕ ಮಾರುಕಟ್ಟೆಯಿಂದ 6.55 ಲಕ್ಷ ಕೋಟಿ ರೂ. ಸಾಲ ಪಡೆಯಲಿದೆ.
ಈ ಬಗ್ಗೆ ಕೇಂದ್ರ ಸರ್ಕಾರ ಮಂಗಳವಾರ ಮಾಹಿತಿ ನೀಡಿದ್ದು, 2023- 24ರ ಅಕ್ಟೋಬರ್ ಮಾರ್ಚ್ ಅವಧಿಗೆ ಬಾಂಡ್ ನೀಡಿಕೆ ಮೂಲಕ ಮಾರುಕಟ್ಟೆಯಿಂದ 6.55 ಲಕ್ಷ ಕೋಟಿ ರೂ. ಸಾಲ ಪಡೆಯಲಾಗುವುದು ಎಂದು ತಿಳಿಸಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮಾರುಕಟ್ಟೆಯಿಂದ 15.43 ಲಕ್ಷ ಕೋಟಿ ಸಾಲ ಪಡೆಯಲು ನಿರ್ಧರಿಸಿದ್ದು, ಈಗಾಗಲೇ ಇದರಲ್ಲಿ 8.88 ಲಕ್ಷ ಕೋಟಿ ರೂ. ಸಾಲ ಪಡೆಯಲಾಗಿದೆ.
ಸಾಲದ ಒಟ್ಟು ಮೊತ್ತದಲ್ಲಿ 20 ಸಾವಿರ ಕೋಟಿ ರೂಪಾಯಿ ಮೌಲ್ಯದ ಸಾವರಿನ್ ಗ್ರೀನ್ ಬಾಂಡ್ ನೀಡಿಕೆ ಕೂಡ ಸೇರಿದೆ. ಕನಿಷ್ಠ 3ರಿಂದ ಗರಿಷ್ಠ 40 ವರ್ಷಗಳ ಅವಧಿವರೆಗಿನ ಬಾಂಡ್ ಗಳನ್ನು ವಿತರಿಸುವ ಮೂಲಕ ಸಾಲ ಪಡೆಯುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಪ್ರಸಕ್ತ ಆರ್ಥಿಕ ವರ್ಷ 2023- 24ರ ಅಂತ್ಯದ ವೇಳೆಗೆ(2024ರ ಮಾರ್ಚ್ 31) ಮಾರುಕಟ್ಟೆಯಿಂದ 15.43 ಲಕ್ಷ ಕೋಟಿ ರೂ. ಸಾಲ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ.
ಸರ್ಕಾರವು ತನ್ನ ಹಣಕಾಸಿನ ಕೊರತೆಯನ್ನು ಮುಖ್ಯವಾಗಿ ಮಾರುಕಟ್ಟೆ ಸಾಲಗಳ ಮೂಲಕ ಪೂರೈಸುತ್ತದೆ. 2023-24ಕ್ಕೆ 15.43 ಲಕ್ಷ ಕೋಟಿಗಳ ಒಟ್ಟು ಮಾರುಕಟ್ಟೆ ಸಾಲವನ್ನು ಸರ್ಕಾರ ಯೋಜಿಸಿತ್ತು ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.