ಗ್ರೀಕ್ ಪಟ್ಟಣದಲ್ಲಿ ವಾಸವಿದ್ದ ಕುರಿಗಳ ಹಿಂಡೊಂದು ಬರೋಬ್ಬರಿ 100 ಕೆಜಿ ಗಾಂಜಾವನ್ನು ತಿಂದಂತಹ ಘಟನೆಯೊಂದು ವೈರಲ್ ಆಗಿದೆ. ಗ್ರೀಸ್, ಲಿಬಿಯಾ, ಟರ್ಕಿ ಹಾಗೂ ಬಲ್ಗೇರಿಯಾದಲ್ಲಿ ಮಾರಣಾಂತಿಕ ಚಂಡಮಾರುತ ಬೀಸಿದ್ದು ಈ ಪ್ರಾಣಿಗಳು ಗ್ರೀಕ್ನ ಪಟ್ಟಣವೊಂದರಲ್ಲಿ ಆಶ್ರಯ ಪಡೆದಿದ್ದವು ಎನ್ನಲಾಗಿದೆ.
ಮರಿಜುವಾನಾ ಗಾಂಜಾದ ಗಿಡಗಳನ್ನು ಗ್ರೀಸ್ ಮಧ್ಯಭಾಗದಲ್ಲಿರುವ ಥೆಸಲಿಯಾ ಅಲ್ಮಿರೋಸ್ ಪಟ್ಟಣದ ಸಮೀಪದಲ್ಲೇ ಇರೋ ಹಸಿರು ಮನೆಯಲ್ಲಿ ಬೆಳೆಯಲಾಗುತ್ತಿತ್ತು ಎಂದು ಹೇಳಲಾಗಿದೆ.
ಗಾಂಜಾ ಗಿಡಗಳನ್ನು ಸೇವಿಸಿ ಬಂದಿದ್ದ ಕುರಿಗಳು ಕುರಿಗಾಹಿಯ ಎದುರು ವಿಚಿತ್ರವಾಗಿ ವರ್ತಿಸುತ್ತಿದ್ದವು. ಇದನ್ನು ಗಮನಿಸಿದ ಕುರಿಗಾಹಿಗೆ ಇಲ್ಲೇನೋ ಸಮಸ್ಯೆ ಆಗಿದೆ ಅನ್ನೋದು ಅರಿವಿಗೆ ಬಂದಿದೆ. ಆಡುಗಳು ಎತ್ತರೆತ್ತರಕ್ಕೆ ಜಿಗಿಯುತ್ತಿದ್ದವು. ಈ ರೀತಿ ಅವುಗಳು ಎಂದಿಗೂ ಮಾಡುತ್ತಿರಲಿಲ್ಲ ಎಂದು ಫಾರ್ಮ್ ಮಾಲೀಕ ಯಾನ್ನೀಸ್ ಬೌರೌನಿಸ್ ಹೇಳಿದ್ದಾರೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿಯು ಇಂತದ್ದೇ ಒಂದು ಘಟನೆ ಸಂಭವಿಸಿತ್ತು. ಮಥುರಾ ಪೊಲೀಸ್ ಠಾಣೆಯ ಗೋದಾಮಿನಲ್ಲಿ ಇರಿಸಲಾಗಿದ್ದ 500ಕೆಜಿಗೂ ಅಧಿಕ ಗಾಂಜಾಗಳನ್ನು ಇಲಿಗಳು ಸೇವಿಸಿದ್ದವು. ಬರೋಬ್ಬರಿ 60 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಗಳನ್ನು ಇಲಿಗಳು ನಾಶ ಮಾಡಿದ್ದವು.