ಏರ್ ಇಂಡಿಯಾ ವಿಮಾನದ ಒಳಗೆ ಎಂಟ್ರಿ ಆದರೆ ಸಾಕು, ಸೀರೆ ಉಟ್ಟ ಸುಂದರ ನಾರಿಯರು ನಗನಗುತ್ತ, ಕೈ ಜೋಡಿಸಿ ಸ್ವಾಗತ ಮಾಡುತ್ತಾರೆ. ಆದರೆ ಹೀಗೆ ಸೀರೆ ಉಟ್ಟು ವಿಮಾನದ ಒಳಗೆಲ್ಲ ಓಡಾಡೋ ನಾರಿಯರು ಇನ್ಮುಂದೆ ನೋಡಲು ಸಿಗೋಲ್ಲ. ಕಾರಣ ಏರ್ ಇಂಡಿಯಾ ವಿಮಾನದಲ್ಲಿ ಬದಲಾಗಲಿದೆ ಗಗನ ಸಖಿಯರ ಉಡುಗೆ-ತೊಡುಗೆ.
ಏರ್ ಇಂಡಿಯಾ ವಿಮಾನ ಸಿಬ್ಬಂದಿಗಳು ಬರಲಿರುವ ನವೆಂಬರ್ನಿಂದ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಬಗ್ಗೆ ಏರ್ ಇಂಡಿಯಾ ಈ ಹಿಂದೆ ಅಗಸ್ಟ್ ತಿಂಗಳಲ್ಲೇ ಘೋಷಿಸಿತ್ತು. ಇನ್ಮುಂದೆ ಏರ್ ಇಂಡಿಯಾ ಗಗನ ಸಖಿಯರು ಚೂಡಿದಾರ್ ವಿನ್ಯಾಸದ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಜೊತೆಗೆ ಪುರುಷ ಸಿಬ್ಬಂದಿಗಳು ಸೂಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
1962ರಲ್ಲಿ ಜೆಆರ್ಡಿ ಟಾಟಾ ಅವರ ಕಾಲದಲ್ಲಿ ವಿಮಾನಯಾನ ಕಂಪನಿಯ ಮಹಿಳಾ ಸಿಬ್ಬಂದಿ ಸ್ಕರ್ಟ್, ಜಾಕೆಟ್, ಕ್ಯಾಪ್ ರೀತಿಯ ಉಡುಗೆ ಧರಿಸುತ್ತಿದ್ದರು. ಆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಗಗನಸಖಿಯರು ಆಂಗ್ಲೋ ಇಂಡಿಯನ್ ಮತ್ತು ಯುರೋಪಿಯನ್ ಮೂಲದ ಮಹಿಳೆಯರಾಗಿದ್ದರು. ಆದರೆ ಈಗ ಕಂಪನಿ ಸುಮಾರು 6 ದಶಕಗಳ ನಂತರ ಸಿಬ್ಬಂದಿಗಳ ಸಮವಸ್ತ್ರದಲ್ಲಿ ಬದಲಾವಣೆ ಮಾಡಲು ಮುಂದಾಗಿದೆ.
ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ಹೊಸ ಲುಕ್ನ ಜವಾಬ್ದಾರಿಯನ್ನ ಹೊತ್ತಿದ್ದು, ಈ ಬಾರಿಯೂ ಭಾರತೀಯ ಶೈಲಿಯ ರೀತಿಯಲ್ಲೇ ಸಮವಸ್ತ್ರ ವಿನ್ಯಾಸ ಮಾಡಲಾಗುವುದು ಎಂದು ಹೇಳಿದ್ದಾರೆ. ಅಲ್ಲಿಗೆ ನವೆಂಬರ್ ತಿಂಗಳಿಂದ ಏರ್ ಇಂಡಿಯಾ ವಿಮಾನದಲ್ಲಿ ಸಿಬ್ಬಂದಿಗಳು ಹೊಸ ಸಮವಸ್ತ್ರ ಧರಿಸಿ ಓಡಾಡುವುದನ್ನ ನೋಡಬಹುದಾಗಿದೆ.