ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರವಾಗಿ ಜಲಸಂರಕ್ಷಣಾ ಸಮಿತಿ ನಾಳೆ ಕರೆ ನೀಡಿರುವ ಬೆಂಗಳೂರು ಬಂದ್ ಗೆ ವಿಪಕ್ಷ ನಾಯಕರು ಬೆಂಬಲ ನೀಡಿದ್ದು, ರಾಜ್ಯದ ಹಿತರಕ್ಷಣೆಗೆ ಪ್ರತಿಭಟನೆ ಮಾಡಲು ನಾವು ಸಹಕಾರ ನೀಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನೆಲ, ಜಲ, ಭಾಷೆಯನ್ನು ಎಲ್ಲರೂ ಉಳಿಸಿಕೊಳ್ಳಬೇಕು. ಯಾರ ಹೋರಾಟಗಳಿಗೂ ಸರ್ಕಾರ ಅಡ್ಡಿಪಡಿಸುವುದಿಲ್ಲ. ಆದರೆ ಇದರಿಂದ ಜನರಿಗೆ ತೊಂದರೆ ಆಗಬಾರದು, ಶಾಂತಿ ಕಾಪಾಡಬೇಕು ಎಂದರು.
ಪ್ರತಿಭಟಿಸುವುದು ಪ್ರಜಾಪ್ರಭುತ್ವದ ಹಕ್ಕು, ನಾವು ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೇವೆ. ನಮ್ಮ ಪಕ್ಷದವರು ಸಹ ಏನು ಮಾಡುವುದು ಎಂದು ಕೇಳಿದರು, ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ಹೋರಾಟ ಮಾಡಿ ಎಂದು ಹೇಳಿದ್ದೇವೆ. ಸುಪ್ರೀಂಕೋರ್ಟ್, ಹೈಕೋರ್ಟ್ ತೀರ್ಪು ಬಾಕಿ ಇದೆ, ಮಾಧ್ಯಮಗಳಲ್ಲಿ ಹೆಸರು ಬರುತ್ತದೆ ಎಂದು ಹೋರಾಟಕ್ಕೆ ಕರೆ ನೀಡಿದರೆ ಲಾಭವೇನು? ತೀರ್ಪು ಬಂದರೆ ಏನು ಮಾಡುತ್ತಾರೆ? ಎಂದರು.
ಹೋರಾಟಗಳಿಂದ ಕಾನೂನಾತ್ಮಕ ತೊಂದರೆ ಆಗುವುದಿಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಓರ್ವ ಸಚಿವನಾಗಿ ಇದಕ್ಕೆ ಉತ್ತರ ನೀಡಲು ಆಗುವುದಿಲ್ಲ. ನ್ಯಾಯಾಲಯಕ್ಕೆ ಹಾಗೂ ಜನ ಇಬ್ಬರಿಗೂ ಗೌರವ ಕೊಡಬೇಕು. ಜನ ಸಹಕಾರ ಕೊಡದೆ ಇದ್ದರೆ ಬಂದ್ ಹೆಸರಿನ ಹೋರಾಟಕ್ಕೆ ಮರ್ಯಾದೆ ಇರುವುದಿಲ್ಲ. devil and the deep blue sea ಪರಿಸ್ಥಿತಿಯಲ್ಲಿ ನಾವಿದ್ದೇವೆ, ಏನಂತ ಉತ್ತರಿಸಲಿ? ಎಂದು ಕೇಳಿದರು.