ಬೆಂಗಳೂರು : ಸೆ.26 ರಂದು ನಡೆಯುವ ‘ಬೆಂಗಳೂರು ಬಂದ್’ ಗೆ ಖಾಸಗಿ ಶಾಲೆ ಒಕ್ಕೂಟಗಳು ಬೆಂಬಲ ನೀಡಿದೆ.
ಈ ಬಗ್ಗೆ ಕ್ಯಾಮ್ಸ್ ಸಂಘಟನೆ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮಾಹಿತಿ ನೀಡಿದ್ದು, ಬೆಂಗಳೂರು ಬಂದ್’ ಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಬಂದ್ ದಿನ ಕಪ್ಪು ಪಟ್ಟಿ ಧರಿಸಿ ನೈತಿಕ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದರು.
ಮಕ್ಕಳಿಗೆ ಪರೀಕ್ಷೆ ಹತ್ತಿರವಾಗುತ್ತಿರುವ ಹಿನ್ನೆಲೆ ರಜೆ ನೀಡುವ ವಿಚಾರದಲ್ಲಿ ತಟಸ್ಥವಾಗಿದ್ದು, ಈ ಕುರಿತು ಒಂದು ದಿನ ಪರಿಸ್ಥಿತಿ ಅವಲೋಕಿಸಿ ರಜೆ ನೀಡುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಅವರು ಹೇಳಿದರು.ಸೆ.26 ರಂದು ನಡೆಯುವ ‘ಬೆಂಗಳೂರು ಬಂದ್’ ಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿದೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿರುವ ಬೆನ್ನಲ್ಲೇ ರಾಜ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಕರ್ನಾಟಕ ಜಲಸಂರಕ್ಷಣಾ ಸಮಿತಿಯಿಂದ ಫ್ರೀಡಂ ಪಾರ್ಕ್ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಬೆಂಗಳೂರಿನ ಪ್ರಮುಖ ಅಪಾರ್ಟ್ ಮೆಂಟ್ ಅಸೋಸಿಯೇಷನ್, ಲೇಔಟ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘ, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಐಟಿ ಕಂಪನಿಗಳು ಭಾಗಿಯಾಗಿದ್ದವು. ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ರೈತ ಪರ ವಿವಿಧ ಸಂಘಟನೆಗಳು ಸೆ.26 ರಂದು ‘ಬೆಂಗಳೂರು ನಗರ’ ಬಂದ್ ಘೋಷಿಸಿದೆ.ಇದರ ನಡುವೆ ಕರ್ನಾಟಕ ಬಂದ್ ಗೂ ಕರೆ ಕೊಡಲು ಕನ್ನಡಪರ ಸಂಘಟನೆಗಳು ನಿರ್ಧರಿಸಿದೆ. ಸೋಮವಾರ ಕರ್ನಾಟಕ ಬಂದ್ ದಿನಾಂಕ ಘೋಷಣೆ ಮಾಡಲಾಗುತ್ತದೆ.