ಬೆಂಗಳೂರು: ಕಾವೇರಿ ನೀರಿಗಾಗಿ ರೈತರ ಹಾಗೂ ಕನ್ನಡಪರ ಸಂಘಟನೆಗಳ ಆಕ್ರೋಶ ಭುಗಿಲೆದ್ದಿದೆ. ಒಂದೆಡೆ ರೈತರು ಮಂಡ್ಯ ಬಂದ್ ಗೆ ಕರೆ ನೀಡಿದ್ದರೆ ಮತ್ತೊಂದೆಡೆ ಮದ್ದೂರು, ರಾಜಧಾನಿ ಬೆಂಗಳೂರಿನಲ್ಲಿಯೂ ಪ್ರತಿಭಟನೆ ತೀವ್ರಗೊಳ್ಳಲಿದೆ.
ರೈತರ ಹಾಗೂ ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲ ನೀಡಿದ್ದು, ಪ್ರತಿಭಟನೆಗೆ ಸಜ್ಜಾಗಿವೆ. ಕಾವೇರಿ ಕಿಚ್ಚು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ವಲಯ ಹೆಚ್ಚುವರಿ ಆಯುಕ್ತರು ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ.
ತಮಿಳುನಾಡು ಕಡೆ ಹೊರಡುವ ಬಸ್ ಗಳು, ತಮಿಳುಗರು ವಾಸಿಸುವ ಸ್ಥಳಗಳಲ್ಲಿ ಹಾಗೂ 2016ರಲ್ಲಿ ಕಾವೇರಿ ಗಲಾಟೆ ನಡೆದ ಏರಿಯಾಗಳಲ್ಲಿ ತೀವ್ರ ನಿಗಾ ವಹಿಸುವತೆ ಸೂಚಿಸಲಾಗಿದೆ.
ನಗರದ ಪಶ್ಚಿಮ ಹಾಗೂ ಉತ್ತರ ವಿಭಗ, ಮೈಸೂರು ರಸ್ತೆಯ ಸುತ್ತಮುತ್ತಲ ಪ್ರದೇಶ, ಹೊಸೂರು ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶ, ಆರ್.ಆರ್.ನಗರ, ಬ್ಯಾಟರಾಯನಪುರ, ಸ್ಯಾಟಲೈಟ್ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲ ಪ್ರದೇಶ, ಮಾರ್ಕೆಟ್ ಸೇರಿದಂತೆ ಪ್ರಮುಖ ಏರಿಯಾಗಳಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲು ಹಾಗೂ ಗಸ್ತು ವಹಿಸುವಂತೆ ಸೂಚಿಸಲಾಗಿದೆ.