ಸೊಳ್ಳೆಗಳ ಕಚ್ಚುವಿಕೆಯಿಂದ ಹರಡುವ ಡೆಂಗ್ಯು, ಚಿಕುನ್ಯ ಗುನ್ಯಾ, ಮಲೇರಿಯಾ, ಮುಂತಾದ ರೋಗಗಳ ನಿಯಂತ್ರಣಕ್ಕೆ ಸಾರ್ವಜನಿಕರು ಈ ಮೂಲಕ ಎಚ್ಚರಿಕೆ ವಹಿಸಬೇಕಿದೆ.
ಮನೆಗೆ ಬಳಸಲು ನೀರು ಅತ್ಯಗತ್ಯವಾಗಿದ್ದು, ನೀರು ತುಂಬುವ ಪರಿಕರಗಳಾದ ಡ್ರಮ್, ಬ್ಯಾರಲ್, ಸಿಮೆಂಟ್ ತೊಟ್ಟಿ, ಮಣ್ಣಿನ ಮಡಿಕೆಗಳಿಗೆ ನೀರು ತುಂಬಿದ ನಂತರ ಸರಿಯಾಗಿ ಮುಚ್ಚಳ ಮುಚ್ಚುವ ಮೂಲಕ ಸೊಳ್ಳೆಗಳು ಮೊಟ್ಟೆಯಿಡಲು ನೀರು ಸಿಗದಂತೆ ಸಾರ್ವಜನಿಕರು ಜಾಗ್ರತೆ ವಹಿಸಬೇಕು.
ಮುಂಜಾಗ್ರತಾ ಕ್ರಮವಾಗಿ ಮನೆ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡುವುದು, ನೀರು ನಿಲ್ಲುವ ತಾಣಗಳನ್ನು ಮಣ್ಣು ಹಾಕಿ ಮುಚ್ಚುವುದು, ನೀರು ನಿಲ್ಲುವ ಟೈರ್, ಟಿನ್, ಪ್ಲಾಸ್ಟಿಕ್ ಕಪ್ ಗಳನ್ನು ಸೂಕ್ತ ವಿಲೇವಾರಿ ಮಾಡಿ, ನೀರು ತುಂಬುವ ಡ್ರಮ್, ಬ್ಯಾರೆಲ್, ತೊಟ್ಟಿ ಮುಂತಾದವುಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ನೀರು ತುಂಬಿ ಸೊಳ್ಳೆಗಳು ನೀರಿನ ಮೇಲೆ ಕೂಡದ ಹಾಗೆ ಮುಚ್ಚಳ ಮುಚ್ಚುವ ಇಲ್ಲವೆ ಬಟ್ಟೆಯನ್ನು ಕಟ್ಟುವ ಕ್ರಮವಹಿಸಬೇಕಿದೆ.
ಮಲಗುವಾಗ ಸೊಳ್ಳೆ ಪರದೆಗಳ ಬಳಕೆ, ಯಾರಿಗಾದರೂ ಚಳಿಜ್ವರ, ಅತಿಯಾದ ತಲೆನೋವು, ಕಣ್ಣಿನ ಹಿಂಭಾಗ ಜಗ್ಗಿದಂತಾಗುವುದು ಮುಂತಾದವುಗಳು ಕಂಡು ಬಂದರೆ ತಕ್ಷಣ ಹತ್ತಿರದ ಆಸ್ಪತ್ರೆಗೆ ಬೇಟಿ ನೀಡಿ ರಕ್ತ ಪರೀಕ್ಷೆ ಮಾಡಿಸಿ ರೋಗ ಖಚಿತಪಟ್ಟಲ್ಲಿ ಚಿಕಿತ್ಸೆ ಪಡೆಯಬೇಕು.
ಮನೆಯ ಸುತ್ತಲೂ ಸ್ವಚ್ಛತೆ ಕಾಪಾಡುವ ಜೊತೆಗೆ ಶಾಶ್ವತವಾಗಿ ನೀರು ನಿಲ್ಲುವ ತಾಣಗಳಲ್ಲಿ ಸೊಳ್ಳೆ ಮರಿಗಳನ್ನು ಆಹಾರವಾಗಿ ಉಪಯೋಗಿಸುವ ಲಾರ್ವಹಾರಿ ಮೀನುಗಳಾದ ಗಾಂಬೋಷಿಯ ಮತ್ತು ಗಪ್ಪಿ ಮೀನುಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಉಚಿತವಾಗಿ ಪಡೆದುಕೊಂಡು ಸೊಳ್ಳೆಗಳ ನಿಯಂತ್ರಣ ಮತ್ತು ರೋಗ ತಡೆಗೆ ಕ್ರಮ ಕೈಗೊಳ್ಳಬಹುದಾಗಿದೆ.