ಬೆಂಗಳೂರು : ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಅಭಿನವ ಹಾಲಶ್ರೀ ಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ಸ್ಥಳ ಮಹಜರು ಮಾಡಲು ಹಾಲಸ್ವಾಮಿ ಮಠಕ್ಕೆ ಕರೆದುಕೊಂಡಿದ್ದಾರೆ. ಈ ವೇಳೆ ಮಠದಲ್ಲಿ ಲಕ್ಷ ಲಕ್ಷ ಹಣವಿರುವ ಬ್ಯಾಗ್ ಪತ್ತೆಯಾಗಿದೆ.
ವಿಜಯ ನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿಯಲ್ಲಿರುವ ಹಾಲಸ್ವಾಮಿ ಮಠಕ್ಕೆ ಹಾಲಶ್ರೀ ಜೊತೆ ಸಿಸಿಬಿ ಪೊಲೀಸರು ಸ್ಥಳ ಮಹಜರು ನಡೆಸಲು ಹೋಗಿದ್ದಾರೆ. ಬ್ಯಾಗ್ ನಲ್ಲಿ 56 ಲಕ್ಷ ಹಣವಿದ್ದು, ಇದನ್ನು ಪ್ರಣವ್ ಪ್ರಸಾದ್ ಎಂಬ ವಕೀಲರು ಮಠಕ್ಕೆ ನೀಡಿದ್ದಾರೆ ಎಂದು ಹೇಳಲಾಗಿದೆ. ‘ಶ್ರೀಗಳ ಕಾರು ಚಾಲಕ ನನ್ನ ಕಚೇರಿಗೆ ಹಣ ತಲುಪಿಸಿದ್ದರು. 60 ಲಕ್ಷ ಹಣದ ಪೈಕಿ 4 ಲಕ್ಷವನ್ನು ವಕೀಲರ ಶುಲ್ಕಕ್ಕೆ ನೀಡಿದ್ದರು. ನಂತರ ಅವರು ಉಳಿದ ಹಣ ತೆಗೆದುಕೊಂಡು ಹೋಗದಿರುವ ಹಿನ್ನೆಲೆ ಉಳಿದ 56 ಲಕ್ಷ ಹಣವನ್ನು ಮಠಕ್ಕೆ ಒಪ್ಪಿಸಿದ್ದೇನೆ ಎಂದು ವಕೀಲ ಪ್ರಣವ್ ಪ್ರಸಾದ್ ಎಂಬುವವರು ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದು, ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಾಗಿದೆ.
ಉದ್ಯಮಿಗೆ 5 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿ ಅಭಿನವ ಹಾಲಶ್ರೀಯನ್ನು ಸೆ.29 ರವರೆಗೆ 10 ದಿನ ಸಿಸಿಬಿ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.ಬೆಂಗಳೂರಿನ 19 ನೇ ACMM ಕೋರ್ಟ್ ಗೆ ಅಭಿನವ ಹಾಲಶ್ರೀಯನ್ನು ಇಂದು ಹಾಜರುಪಡಿಸಲಾಗಿದ್ದು, ಸೆ.29 ರವರೆಗೆ 10 ದಿನ ಸಿಸಿಬಿ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.