ಕಲಬುರ್ಗಿ: ಮಾಜಿ ಸಿಎಂ ಪುತ್ರರೊಬ್ಬರು ಬಿಜೆಪಿಗೆ ಸೇರಲು ಮುಂದಾಗಿದ್ದರು ಎಂದು ಜೆಡಿಎಸ್ ಮುಖಂಡ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹೊಸ ಬಾಂಬ್ ಸಿಡಿಸಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೊಡ್ಡಪ್ಪ ಪಾಟೀಲ್, ಮಾಜಿ ಸಿಎಂ ಧರಂಸಿಂಗ್ ಪುತ್ರ ಶಾಸಕ, ಕೆಕೆಆರ್ ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಬಿಜೆಪಿ ಸೇರಲು ಮುಂದಾಗಿದ್ದರು ಎಂದು ಹೇಳಿದ್ದಾರೆ.
2018ರಲ್ಲಿ ಅಜಯ್ ಸಿಂಗ್ ಬಿಜೆಪಿ ಕದ ತಟ್ಟಿದ್ದರು. ಈ ಬಗ್ಗೆ ಬಿಜೆಪಿ ವರಿಷ್ಠರ ಜೊತೆಯಲ್ಲಿಯೂ ಅಜಯ್ ಸಿಂಗ್ ಚರ್ಚಿಸಿ ಕೆಲ ಷರತ್ತುಗಳನ್ನು ಹಾಕಿದ್ದರು ಎಂದು ಹೇಳಿದ್ದಾರೆ.
ಅಂದಿನ ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ್ ರಾವ್ ಹಾಗೂ ಯಡಿಯೂರಪ್ಪ ನನ್ನ ಜೊತೆ ಈ ಬಗ್ಗೆ ಮಾತನಾಡಿದ್ದರು. ಡಾ.ಅಜಯ್ ಸಿಂಗ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಬೇಕಾ ಅಥವಾ ಬೇಡವೇ ಎಂಬ ಬಗ್ಗೆ ಬಿಎಸ್ ವೈ ನನ್ನ ಜೊತೆ ಚರ್ಚಿಸಿದ್ದರು. ಅಂದು ನಾನು ಕಲಬುರ್ಗಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷನಾಗಿದ್ದೆ. ಅಜಯ್ ಸಿಂಗ್ ಸೇರ್ಪಡೆಯಿಂದ ಒಳ್ಳೆಯದಾಗುತ್ತೆ ಎನ್ನುವುದಾದರೆ ಸೇರಿಸಿಕೊಳ್ಳೋಣ ಎಂದು ಹೇಳಿದ್ದೆ ಎಂದಿದ್ದಾರೆ.
ಕಾಂಗ್ರೆಸ್ ಮುಂದೆ ಇಟ್ಟಿದ್ದ ಬೇಡಿಕೆಯನ್ನು ಅಜಯ್ ಸಿಂಗ್ ಬಿಜೆಪಿ ಮುಂದೆ ಇಟ್ಟಿದ್ದರು. ಅಜಯ್ ಸಿಂಗ್ ಜೇವರ್ಗಿ ಕ್ಷೇತ್ರಕ್ಕೆ, ಸಹೋದರ ವಿಜಯ್ ಸಿಂಗ್ ಬಸವಕಲ್ಯಾಣ ಕ್ಷೇತ್ರಕ್ಕೆ, ಭಾವ ಚಂದ್ರಸಿಂಗ್ ಬೀದರ್ ಕ್ಷೇತ್ರಕ್ಕೆ ಟಿಕೆಟ್ ಬೇಡಿಕೆ ಇಟ್ಟಿದ್ದರು ಎಂದು ತಿಳಿಸಿದ್ದಾರೆ.