ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಬ್ಯಾರೆಲ್ ಗೆ 90 ಡಾಲರ್ ದಾಟಿದ್ದು, ಇದರಿಂದಾಗಿ ಭಾರತ ಸೇರಿದಂತೆ ಏಷ್ಯಾ ದೇಶಗಳ ಹಣದುಬ್ಬರ ಸಮಸ್ಯೆ ತೀವ್ರವಾಗುವ ಸಾಧ್ಯತೆ ಇದೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುವ ಸಂಭವ ಇದೆ.
ಚುನಾವಣೆ ವರ್ಷವಾಗಿರುವ ಕಾರಣ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ಕಚ್ಚಾ ತೈಲದ ದರ ಏರಿಕೆ ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಇಳಿಕೆ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಜನವರಿಯಿಂದ ಕಚ್ಚಾ ತೈಲ ದರ ಶೇ. 30 ರಷ್ಟು ಹೆಚ್ಚಳವಾಗಿದ್ದು, ಬ್ಯಾರೆಲ್ ಗೆ 90 ಡಾಲರ್ ದಾಟಿದೆ. ಮಂಗಳವಾರ WTI ಕಚ್ಚಾತೈಲ ದರ ಶೇಕಡ 1.06ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್ ಗೆ 92.54 ಡಾಲರ್ ನಲ್ಲಿ ವಹಿವಾಟು ನಡೆಸಿದೆ. ಬ್ರೆಂಟ್ ಕಚ್ಚಾ ತೈಲ ದರ ಶೇಕಡ 0.63 ರಷ್ಟು ಹೆಚ್ಚಳವಾಗಿದ್ದು ಪ್ರತಿ ಬ್ಯಾರೆಲ್ ಗೆ 93.91 ಡಾಲರ್ ಗೆ ತಲುಪಿದೆ.
ಭಾರತ ವಿಶ್ವದಲ್ಲೇ ಕಚ್ಚಾ ತೈಲು ಆಮದುವಿನಲ್ಲಿ ಮೂರನೇ ದೊಡ್ಡ ದೇಶವಾಗಿದೆ. ತೈಲದರದಲ್ಲಿ 10 ಡಾಲರ್ ಏರಿಕೆ ಆದರೆ ಭಾರತದ ಚಾಲ್ತಿ ಖಾತೆಯ ವಿತ್ತೀಯ ಕೊರತೆಯನ್ನು ಶೇಕಡ 0.2ರಷ್ಟು ಹೆಚ್ಚಿಸುತ್ತದೆ. ತೈಲ ದರ 90 ಡಾಲರ್ ದಾಟಿದ್ದು, ಈ ಟ್ರೆಂಡ್ ಮುಂದುವರೆದರೆ ತೈಲ ಕಂಪನಿಗಳಿಗೆ ನಷ್ಟದ ಪ್ರಮಾಣ ಹೆಚ್ಚಾಗುತ್ತದೆ.