ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಮಾಸ್ಕ್ ಧರಿಸದೇ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದನ್ನು ಒಪ್ಪಿಕೊಂಡ ಭಾರತೀಯ ಮೂಲದ 64 ವರ್ಷದ ಸಿಂಗಾಪುರದ ವ್ಯಕ್ತಿಗೆ ಎರಡು ವಾರಗಳ ಜೈಲುಶಿಕ್ಷೆ ವಿಧಿಸಲಾಗಿದೆ.
2021ರಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿದ್ದ ತಮಿಳುಸೆಲ್ವಂ ರಾಮಯ್ಯ ಉದ್ದೇಶಪೂರ್ವಕವಾಗಿ ಮಾಸ್ಕ್ ಧರಿಸದೇ ತಮ್ಮ ಸಹೋದ್ಯೋಗಿಗಳ ಎದುರು ಕೆಮ್ಮಿದ್ದರು. ತಾನು ಧರಿಸಿದ್ದ ಮಾಸ್ಕ್ನ್ನು ಮೂಗು ಹಾಗೂ ಬಾಯಿಯಿಂದ ಕೆಳಕ್ಕೆ ಇಳಿಸಿ ಕೆಮ್ಮಿದ್ದರು ಎನ್ನಲಾಗಿದೆ.
ತಮಿಳುಸೆಲ್ವಂರಿಗೆ ಶಿಕ್ಷೆ ನೀಡುವ ಸಂದರ್ಭದಲ್ಲಿ ಅವರ ಮೇಲೆ ಇನ್ನೆರಡು ಆರೋಪಗಳನ್ನು ಹೊರಿಸಲಾಗಿದೆ ಎನ್ನಲಾಗಿದೆ. ಈ ಅಪರಾಧವನ್ನು ಎಸಗುವ ಸಂದರ್ಭದಲ್ಲಿ ತಮಿಳುಸೆಲ್ವಂ ಲಿಯಾಂಗ್ ಹಪ್ ಸಿಂಗಾಪುರದಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ನ್ಯಾಯಾಲಯವು ಮಾಹಿತಿ ನೀಡಿದೆ.
ಸಹೋದ್ಯೋಗಿಯೊಬ್ಬರು ತಮಿಳುಸೆಲ್ವಂರಿಗೆ ಪರೀಕ್ಷೆ ನಡೆಸಿದ್ದು ಆಗ ವರದಿಯು ಕೋವಿಡ್ ಪಾಸಿಟಿವ್ ಎಂದು ಬಂದಿತ್ತು ಎನ್ನಲಾಗಿದೆ. 2021ರ ಅಕ್ಟೋಬರ್ 18ರಂದು ತಮಿಳುಸೆಲ್ವಂ ಅಸ್ವಸ್ಥರಾಗಿದ್ದರು. ಈ ವೇಳೆ ಸಹೋದ್ಯೋಗಿ ಅವರಿಗೆ ಕೋವಿಡ್ ಪರೀಕ್ಷೆ ಮಾಡಿದಾಗ ಪಾಸಿಟಿವ್ ವರದಿ ಬಂದಿತ್ತು. ಇದಾದ ಬಳಿಕ ಈ ವರದಿಯನ್ನು ಲಾಜಿಸ್ಟಿಕ್ಸ್ನ ವ್ಯವಸ್ಥಾಪಕರಿಗೆ ಮನೆಗೆ ಕಳಿಸುವಂತೆ ಸೂಚಿಸಲಾಗಿತ್ತು.
ತಮಿಳುಸೆಲ್ವಂರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿದೆ ಎಂಬುದನ್ನು ಬೇರೊಬ್ಬರಿಂದ ತಿಳಿದ ವ್ಯವಸ್ಥಾಪಕ ತಮಿಳುಸೆಲ್ವಂರಿಗೆ ಮನೆಗೆ ತೆರಳುವಂತೆ ಹೇಳಿದ್ದಾರೆ. ಆದರೆ ತಮಿಳುಸೆಲ್ವಂ ತಕ್ಷಣ ಮನೆಗೆ ಹೋಗಲಿಲ್ಲ. ಬದಲಾಗಿ ಅವರು ತಮ್ಮ ಕೋವಿಡ್ 19 ಪರೀಕ್ಷಾ ವರದಿ ಬಗ್ಗೆ ಲಾಜಿಸ್ಟಿಕ್ಸ್ ಮ್ಯಾನೇಜರ್ಗೆ ತಿಳಿಸಲು ಕಂಪನಿಯ ಕಚೇರಿಗೆ ಬಂದಿದ್ದರು ಎನ್ನಲಾಗಿದೆ.
ಕಂಪನಿಯ ಡ್ರೈವರ್ ಜೊತೆಯಲ್ಲಿ ತಮಿಳುಸೆಲ್ವಂ ಕಚೇರಿಗೆ ಆಗಮಿಸಿದ್ದರು. ಚಾಲಕನಿಗೆ ಇವರು ಸೋಂಕಿತ ವ್ಯಕ್ತಿ ಎಂಬುದರ ಅರಿವು ಇರಲಿಲ್ಲ. ವ್ಯವಸ್ಥಾಪಕರನ್ನು ಭೇಟಿಯಾಗುತ್ತಿದ್ದಂತೆಯೇ ಅವರು ಮನೆಗೆ ಹೋಗುವಂತೆ ತಮಿಳುಸೆಲ್ವಂಗೆ ಸೂಚನೆ ನೀಡಿದ್ದರು. ಅಲ್ಲದೇ ಕಚೇರಿ ಬಾಗಿಲನ್ನು ಕ್ಲೋಸ್ ಮಾಡಿದರು.
ಮೊದಲು ವ್ಯವಸ್ಥಾಪಕರ ಎದುರು ಮಾಸ್ಕ್ ಹಾಕಿಕೊಂಡು ಕೆಮ್ಮಿದ ತಮಿಳುಸೆಲ್ವಂ ಬಳಿಕ ಮಾಸ್ಕ್ ತೆಗೆದು ವ್ಯವಸ್ಥಾಪಕರ ಎದುರು ಉದ್ದೇಶಪೂರ್ವಕವಾಗಿ ಕೆಮ್ಮಿದ್ದರು ಎನ್ನಲಾಗಿದೆ. ಈ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿಯೂ ಸೆರೆಯಾಗಿತ್ತು.