ಗಣೇಶ ಮಹಾನ್ ಬುದ್ದಿವಂತ. ಪ್ರಪಂಚವನ್ನು ಪ್ರದಕ್ಷಿಣೆ ಹಾಕಿ ಬನ್ನಿ ಎಂದರೆ ತನ್ನ ತಂದೆ – ತಾಯಿಯನ್ನೇ ಪ್ರದಕ್ಷಿಣೆ ಹಾಕಿ ಮಕ್ಕಳಿಗೆ ಪೋಷಕರಿಗಿಂತಾ ಪ್ರಪಂಚವಿಲ್ಲ ಎಂದು ಸಾರಿದ ಮಹಾನ್ ಮೇಧಾವಿ.
ಗಣೇಶನ ಆಕಾರವೇ ರಹಸ್ಯಮಯ. ಬದುಕಿನ ಗೂಢಾರ್ಥಗಳನ್ನು ಒಳಗೊಂಡಿರುವ ಗಣೇಶನಿಂದ ನಾವು ಕಲಿಯುವುದು ಬಹಳಷ್ಟಿದೆ. ಗಣೇಶನ ನಾಲ್ಕು ಕೈಗಳ ಪೈಕಿ ಒಂದರಲ್ಲಿ ಕುಣಿಕೆ ಅಥವಾ ಹಗ್ಗ ಹಿಡಿದಿರುವುದನ್ನು ನೀವು ಗಮನಿಸಿರಬಹುದು. ಏನಿದರ ಅರ್ಥ ಎಂದು ನಿಮಗೂ ಪ್ರಶ್ನೆ ಕಾಡಿರಬಹುದು. ಇದು ನಿಯಂತ್ರಣವನ್ನು ಸೂಚಿಸುತ್ತದೆ.
ಮನಸ್ಸಿನ ನಿಯಂತ್ರಣ, ಬುದ್ದಿಯ ನಿಯಂತ್ರಣ, ಮಾತಿನ ಮೇಲಿನ ನಿಯಂತ್ರಣ, ಭಾವದ ನಿಯಂತ್ರಣ. ಪ್ರತಿಯೊಂದಕ್ಕೂ ಒಂದು ಎಲ್ಲೆ ಇದ್ದೇ ಇರುತ್ತದೆ. ಎಲ್ಲೆಯ ಒಳಗೆ ಎಲ್ಲವೂ ಸೊಗಸು. ಎಲ್ಲೆ ಮೀರಿದರೆ ಅನಾಹುತ ತಪ್ಪಿದ್ದಲ್ಲ. ಆದ್ದರಿಂದ ಗಣಪ ತನ್ನ ಕೈಯಲ್ಲಿ ಹಿಡಿದ ಹಗ್ಗದಿಂದ ಪ್ರತಿಯೊಬ್ಬರೂ ತಮ್ಮ ದುರ್ಗುಣಗಳ ನಿಯಂತ್ರಣ ಮಾಡಬೇಕು ಎಂಬ ಸೂಚನೆ ಕೊಡುತ್ತಾನೆ. ನಿಯಂತ್ರಣ ಯಾವತ್ತೂ ಬಾಹ್ಯ ಒತ್ತಡದಿಂದ ಬರಬಾರದು. ನಿಯಂತ್ರಣ ಸ್ವಯಂ ಪ್ರಯತ್ನದಿಂದ ಬಂದರೆ, ಎಲ್ಲೆಯ ಅರಿವು ನಮಗಿದ್ದರೆ ಬದುಕು ಸರಾಗ.