ಶಾಲಾ ಶಿಕ್ಷಕರು ಥಳಿಸಿದ ರಭಸಕ್ಕೆ 9 ವರ್ಷದ ಬಾಲಕಿಯ ತಲೆ ಬುರುಡೆಯೇ ಒಡೆದು ಹೋದ ಆಘಾತಕಾರಿ ಘಟನೆಯು ಚೀನಾದಲ್ಲಿ ಸಂಭವಿಸಿದೆ. ಈ ಘಟನೆಯು ಚೀನಾದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಚೀನಾದ ಸುದ್ದಿ ಮಾಧ್ಯಮಗಳು ಮಾಡಿರುವ ವರದಿಯ ಪ್ರಕಾರ, ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ಬೊಕಾಯ್ ಮೆಕ್ಸಿಹು ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ. ಈ ಘಟನೆ ಬಳಿಕ ಸ್ಥಳೀಯ ಪೊಲೀಸರು ಶಿಕ್ಷಣ ಸಾಂಗ್ ಮೌಮಿಂಗ್ರನ್ನು ಬಂಧಿಸಿದ್ದಾರೆ.
ಸೆಪ್ಟೆಂಬರ್ 6ರ ಸಂಜೆ ನಾಲ್ಕು ಗಂಟೆ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಶಾಲಾ ಚಟುವಟಿಕೆಯ ಸಂದರ್ಭದಲ್ಲಿ ಮೌಮಿಂಗ್ ಲೋಹದ ಮಾಪಕದಿಂದ ಬಾಲಕಿಯ ತಲೆಗೆ ಬಾರಿಸಿದ್ದಾರೆ. ಹೊಡೆತದ ರಭಸಕ್ಕೆ ಆಕೆಯ ತಲೆಬುರುಡೆ ಒಡೆದು ಹೋಗಿದೆ. ಆದರೆ ಈ ಬಗ್ಗೆ ಶಾಲಾ ಸಿಬ್ಬಂದಿ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.
ಈ ಘಟನೆ ಬಳಿಕ ಗಾಯಗೊಂಡಿದ್ದ ಮಗುವನ್ನು ಸ್ವತಃ ಶಿಕ್ಷಕ ಮೌಮಂಗ್ ಮಗುವನ್ನು ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಿದ್ದಾರೆ. ಮೊದ ಮೊದಲು ಶಾಲಾ ಶಿಕ್ಷಕರು ಇದೊಂದು ಸಣ್ಣ ಗಾಯ ಎಂದೇ ಎಲ್ಲರನ್ನು ನಂಭಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಗಾಯದ ತೀವ್ರತೆ ನೋಡಿದ ವೈದ್ಯರು ಪೋಷಕರ ಅನುಮತಿ ಬಳಿಕವೇ ಚಿಕಿತ್ಸೆ ನೀಡುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಬೇರೆ ವಿಧಿಯಿಲ್ಲದೇ ಶಾಲಾ ಸಿಬ್ಬಂದಿ ಮಗುವಿನ ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯ ತಲೆಗೆ ವೈದ್ಯರು ಹೊಲಿಗೆ ಹಾಕಿದ್ದಾರೆ ಎಂದು ಬಾಲಕಿಯ ತಾಯಿ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಮಗುವಿನ ತಾಯಿ ವೈದ್ಯರ ಬಳಿ ನನ್ನ ಮಗುವಿಗೆ ತಲೆಯ ಸಂಪೂರ್ಣ ಪರೀಕ್ಷೆ ಮಾಡಿ ಅಂತಾ ಬೇಡಿಕೊಂಡಿದ್ದಾರೆ.
ಮಗುವಿನ ತಾಯಿಯ ಕೋರಿಕೆ ಬಳಿಕ ಪರೀಕ್ಷೆ ನಡೆಸಿದ ವೈದ್ಯರಿಗೆ ಆಘಾತಕಾರಿ ಮಾಹಿತಿ ತಿಳಿದಿದೆ. ಬಾಲಕಿಯ ತಲೆಬುರುಡೆ ಮುರಿದು ಹೋಗಿದೆ ಹಾಗೂ ಆಕೆಯ ತಲೆಯಲ್ಲಿನ ಮೂಳೆಗಳು ಚೂರು ಚೂರಾಗಿವೆ ಎಂದು ತಿಳಿದು ಬಂದಿದೆ.