ವಿಘ್ನನಿವಾರಕ ಗಣಪತಿಯ ಜನ್ಮಕಥೆ ತುಂಬಾ ಆಸಕ್ತಿದಾಯಕವಾಗಿದೆ. ಶಿವ-ಪಾರ್ವತಿಯ ಅನ್ಯೋನ್ಯ ದಾಂಪತ್ಯ ಕೂಡ ಅದೇ ರೀತಿ ಪುರಾಣಗಳಲ್ಲಿ ಪ್ರಸಿದ್ಧಿ ಪಡೆದಿದೆ. ಪತ್ನಿ ಪಾರ್ವತಿಯ ಇಚ್ಛೆ, ಆದೇಶಗಳನ್ನು ಭಗವಾನ್ ಶಿವ ತಪ್ಪದೇ ಪಾಲಿಸುತ್ತಿದ್ದರು. ಪಾರ್ವತಿಯ ಇಬ್ಬರು ಸ್ನೇಹಿತರಾದ ಜಯ ಮತ್ತು ವಿಜಯ ತುಂಬಾ ಸುಂದರ, ಪ್ರತಿಭಾವಂತ ಮತ್ತು ಸದಾ ಒಳಿತನ್ನೇ ಮಾತನಾಡುವ ಸ್ವಭಾವದವರಾಗಿದ್ದರು.
ಒಮ್ಮೆ ಸಂಭಾಷಣೆಯ ಸಮಯದಲ್ಲಿ ಪಾರ್ವತಿಯ ಈ ಇಬ್ಬರು ಸ್ನೇಹಿತರು, ಭಗವಾನ್ ಶಂಕರರು ತಮ್ಮ ಸೂಚನೆಯನ್ನು ಪಡೆದ ತಕ್ಷಣ ಅವರ ಕೆಲಸವನ್ನು ಮಾಡುವ ಅನೇಕ ಸದಸ್ಯರನ್ನು ಹೊಂದಿರುವಂತೆ ನೀವು ಕೂಡ ಒಬ್ಬ ಸದಸ್ಯರನ್ನು ಹೊಂದಿರಬೇಕೆಂದು ಸಲಹೆ ನೀಡಿದರು. ಒಮ್ಮೆ ಪಾರ್ವತಿ ಸ್ನಾನಕ್ಕೆ ಹೋಗುತ್ತಿದ್ದರು. ನಂದಿಯನ್ನು ಬಾಗಿಲಲ್ಲಿ ನಿಲ್ಲಿಸಿ ತಾನು ನದಿಗೆ ಸ್ನಾನ ಮಾಡಲು ತೆರಳುತ್ತಿದ್ದು, ಯಾರಾದರೂ ಬಂದರೆ ಅವರಿಗೆ ಒಳಹೋಗಲು ಅವಕಾಶ ನೀಡದಂತೆ ಸೂಚಿಸಿ ಹೊರಟುಬಿಟ್ಟರು.
ಬಳಿಕ ಭಗವಾನ್ ಶಿವ ಅಲ್ಲಿಗೆ ಆಗಮಿಸಿದ್ದಾರೆ, ಒಳಗೆ ಪ್ರವೇಶಿಸಲು ಮುಂದಾಗಿದ್ದಾರೆ. ನಂದಿ ಅವರನ್ನು ತಡೆಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಶಿವ ದಿಢೀರನೆ ಆಗಮಿಸಿದ್ದರಿಂದ ಸ್ನಾನ ಮಾಡುತ್ತಿದ್ದ ಪಾರ್ವತಿ ಅವರನ್ನು ನೋಡಿ ನಾಚಿಕೆಯಿಂದ ಕುಗ್ಗಿ ಹೋಗಿದ್ದಾರೆ. ಸ್ನಾನ ಮುಗಿಸಿದ ತಾಯಿ ಪಾರ್ವತಿಗೆ ತನ್ನ ಬಳಗವಿದ್ದರೆ ಶಿವನನ್ನೂ ಒಳಗೆ ಬರಲು ಬಿಡುತ್ತಿರಲಿಲ್ಲ ಎಂಬ ಸ್ನೇಹಿತರ ನೆನಪಾಯಿತು. ನಂದಿ ತನ್ನ ಆದೇಶವನ್ನು ನಿರ್ಲಕ್ಷಿಸಿದನೆಂಬ ಭಾವನೆ ಅವರಲ್ಲಿ ಮೂಡಿತು.
ಈ ಆಲೋಚನೆ ಮನಸ್ಸಿಗೆ ಬಂದ ತಕ್ಷಣ ತನ್ನ ದೇಹದ ಕೊಳಕಿನಿಂದ ಜಾಗೃತ ಮನುಷ್ಯನನ್ನು ಸೃಷ್ಟಿಸಿದರು. ಎಲ್ಲಾ ಗುಣಗಳಿಂದ ಆ ಮಗು ಆಶೀರ್ವದಿಸಲ್ಪಟ್ಟಿತು. ದೋಷಗಳಿಲ್ಲದ ಸುಂದರವಾದ ದೇಹ, ಅದ್ಭುತ ಸೌಂದರ್ಯ, ಮಹಾನ್ ಶಕ್ತಿ ಮತ್ತು ಶೌರ್ಯವನ್ನು ಹೊಂದಿದ ಸದ್ಗುಣವಂತ ಆತ. ತಾಯಿ ಪಾರ್ವತಿ ಅವನನ್ನು ಸುಂದರವಾದ ಬಟ್ಟೆ ಮತ್ತು ಆಭರಣಗಳಿಂದ ಅಲಂಕರಿಸಿದರು. ತಮ್ಮ ಪುತ್ರನಿಗೆ ವಿನಾಯಕ ಎಂದು ಹೆಸರಿಟ್ಟರು.