ಹೊಸಪೇಟೆ(ವಿಜಯನಗರ): ಚೈತ್ರಾ ಕುಂದಾಪುರ ಗ್ಯಾಂಗ್ ನಿಂದ ಉದ್ಯಮಿಗೆ 5 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಎ3 ಆರೋಪಿ ಅಭಿನವ ಹಾಲಶ್ರೀ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಡೀಲ್ ಪ್ರಕರಣಕ್ಕೂ ಮಠಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲ್ಲಿ ಗ್ರಾಮದಲ್ಲಿ ಸದ್ಗುರು ಹಾಲಶ್ರೀ ಯೋಗಿ ಸ್ವಾಮೀಜಿ, ಸದ್ಗುರು ಸಿದ್ದೇಶ್ವರ ಶ್ರೀಗಳು ಹೇಳಿದ್ದಾರೆ.
ಕೆಲವು ಕಾರ್ಯಕ್ರಮಕ್ಕೆ ಹೋಗಬಾರದೆಂದು ಹಾಲಶ್ರೀ ಸ್ವಾಮಿಗೆ ಹೇಳಿದ್ದೆವು. ಸ್ವಾಮೀಜಿಗಳಾದವರು ರಾಜಕೀಯ ವಿಚಾರಕ್ಕೆ ಹೋಗಬಾರದು. ರಾಜಕೀಯ ವಿಚಾರಕ್ಕೆ ಹೋದರೆ ಇಂತಹ ಆರೋಪಗಳು ಬರುತ್ತವೆ. ಅಭಿನವ ಹಾಲಶ್ರೀ ತಪ್ಪು ಮಾಡಿಲ್ಲವೆಂದರೆ ಹೆದುರುವ ಅಗತ್ಯವಿಲ್ಲ. ಶ್ರೀಗಳು ನಿರ್ದೋಷಿಯಾಗಿ ಬರಬೇಕೆಂದು ಮಠದ ಭಕ್ತರ ಆಸೆಯಾಗಿದೆ ಎಂದರು.
5 ಕೋಟಿ ಡೀಲ್ ಪ್ರಕರಣದ ತನಿಖೆ ರಾಜಕೀಯವಾಗಿ ನಡೆಯಬಾರದು. ಏನೋ ಷಡ್ಯಂತ್ರ ಇದೆ. ಅಭಿನವ ಹಾಲಶ್ರೀ ಧೈರ್ಯವಾಗಿ ಇರಲಿ. ಬೇಕಂತಲೇ ಇದನ್ನು ಮಾಡಿದ್ದಾರೆ ಎನಿಸುತ್ತದೆ. ಅವರು ಆರೋಪ ಮುಕ್ತರಾಗಿ ಬರಲಿ ಎಂದು ಸದ್ಗುರು ಹಾಲಶ್ರೀ ಯೋಗಿ ಸ್ವಾಮೀಜಿ, ಸದ್ಗುರು ಸಿದ್ದೇಶ್ವರ ಶ್ರೀಗಳು ಹೇಳಿದ್ದಾರೆ.