ಈಗಿನ ಜಮಾನದಲ್ಲಿ ನಗದು ವ್ಯವಹಾರಗಳನ್ನು ಮಾಡೋರಿಗಿಂತ ಕ್ಯಾಶ್ಲೆಸ್ ಅಥವಾ ಡಿಜಿಟಲ್ ಪಾವತಿ ಮಾಡುವವರ ಸಂಖ್ಯೆಯೇ ಹೆಚ್ಚಾಗಿದೆ. ಹೀಗಾಗಿ ಫೋನ್ಪೇ, ಗೂಗಲ್ ಪೇ ಹಾಗೂ ಪೇಟಿಎಂನಂತಹ ಮೊಬೈಲ್ ಆ್ಯಪ್ಗಳನ್ನು ಬಳಕೆ ಮಾಡುವವರ ಸಂಖ್ಯೆ ಅಧಿಕವಾಗಿದೆ.
ನೀವು ನಿಮ್ಮ ಸ್ಮಾರ್ಟ್ಫೋನ್ಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಆರಾಮವಾಗಿ ಪೇಮೆಂಟ್ ಮಾಡಬಹುದು. ಆದರೆ ಈಗೀಗ ನಕಲಿ ಕ್ಯೂಆರ್ ಕೋಡ್ಗಳು ಸಹ ಹೆಚ್ಚಾಗಿದೆ. ಇದರಿಂದಾಗಿ ಅನೇಕ ಸೈಬರ್ ವಂಚನೆ ಪ್ರಕರಣಗಳು ಬೆಳಕಿಗೆ ಬರ್ತಿದೆ.
ನೀವು ಸಹ ನಕಲಿ ಕ್ಯೂಆರ್ ಕೋಡ್ಗಳನ್ನು ಸ್ಕ್ಯಾನ್ ಮಾಡಿದ್ದರೆ ಸೈಬರ್ ವಂಚಕರು ನಿಮ್ಮ ಎಲ್ಲಾ ವೈಯಕ್ತಿಕ ಡಾಟಾಗಳನ್ನು ಕದಿಯಬಹುದಾಗಿದೆ. ವೈಯಕ್ತಿಕ ಡಾಟಾಗಳು ಅಂದರೆ ನಿಮ್ಮ ಹೆಸರು, ಫೋನ್ ನಂಬರ್, ವಿಳಾಸ ಹಾಗೂ ಬ್ಯಾಂಕ್ ವಿವರಗಳನ್ನು ನೀಡಿದ್ರೆ ನಿಮ್ಮ ಹಣವನ್ನು ಎಗರಿಸೋದು ಅವರಿಗೆ ಇನ್ನೂ ಸುಲಭ. ಇದರಲ್ಲೂ ಟ್ರೋಜನ್ಗಳು, ಮಾಲ್ವೇರ್ಗಳು, ರ್ಯಾನ್ಸಮ್ವೇರ್ನಂತಹ ಸಾಫ್ಟ್ವೇರ್ಗಳು ನಕಲಿ ಕ್ಯೂಆರ್ ಕೋಡ್ಗಳನ್ನು ಬಳಸಿಕೊಂಡು ನಿಮ್ಮ ಖಾಸಗಿ ಡೇಟಾಗಳನ್ನು ಸುಲಭವಾಗಿ ಕದಿಯಬಹುದಾಗಿದೆ.
ಯಾವುದೇ ಅಂಗಡಿ ಅಥವಾ ರೆಸ್ಟಾರೆಂಟ್ಗಳಲ್ಲಿ ಕ್ಯೂಆರ್ ಕೋಡ್ಗಳನ್ನು ಸ್ಕ್ಯಾನ್ ಮಾಡುವ ಮುನ್ನ ನೀವು ಕೋಡ್ನ ಆಕಾರವನ್ನು ಗಮನಿಸಬೇಕು. ಒಂದು ವೇಳೆ ಕ್ಯೂಆರ್ ಕೋಡ್ಗಳು ವಿಭಿನ್ನವಾಗಿ ಕಂಡರೆ ಅಥವಾ ಕ್ಯೂಆರ್ ಕೋಡ್ನ್ನು ಮೇಲಿಂದ ಅಂಟಿಸಿದಂತೆ ಎನಿಸಿದರೆ ನೀವು ಕ್ಯೂಆರ್ ಕೋಡ್ ಪಾವತಿ ಮಾಡೋದನ್ನು ನಿಲ್ಲಿಸುವುದು ಒಳ್ಳೆದು. ಇಂಥಹ ಸಂದರ್ಭದಲ್ಲಿ ನಗದು ಪಾವತಿಯನ್ನೇ ಆಯ್ಕೆ ಮಾಡಿಕೊಳ್ಳಿ.
ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆಯೇ ಅಲ್ಲಿ ಅಂಗಡಿ ಅಥವಾ ವ್ಯಾಪಾರಿ ಹೆಸರು ಸರಿಯಾಗಿ ಇದೆಯೇ ಎಂಬುದನ್ನು ಪರಿಶೀಲನೆ ಮಾಡಿ. ಹಣ ಯಾರ ಹೆಸರಿಗೆ ವರ್ಗಾವಣೆ ಆಗ್ತಿದೆ ಅನ್ನೋದನ್ನ ಅಂಗಡಿಯವರಿಂದ ಸರಿಯಾಗಿ ಕೇಳಿಕೊಳ್ಳಿ. ಅಂಗಡಿಯವನು ಹೇಳಿದ ಹೆಸರು ನಿಮ್ಮ ಮೊಬೈಲ್ ಸ್ಕ್ರೀನ್ನಲ್ಲಿ ಕಂಡಲ್ಲಿ ಮಾತ್ರ ನಿಮ್ಮ ಪಾವತಿಯನ್ನು ಮುಂದುವರಿಸೋದು ಉತ್ತಮ.