ವೈದ್ಯೆಯಾಗಬೇಕೆಂಬ ಕನಸು ಕಾಣುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ರಾಜಸ್ಥಾನದ ಕೋಟಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಈ ವಿಚಾರ ಕುರಿತಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಮ್ಮುಖದಲ್ಲಿಯೇ ಮಾತನಾಡಿದ್ದ ಸಚಿವ ಶಾಂತಿ ಧಾರಿವಾಲಾ ಈ ಸಾವಿಗೆ ಪ್ರೇಮ ವೈಫಲ್ಯವೇ ಕಾರಣವೆಂದು ಹೇಳಿದ್ದರು.
ಅಲ್ಲದೆ ಸ್ವತಃ ವಿದ್ಯಾರ್ಥಿನಿಯೆ ತನ್ನ ಡೆತ್ ನೋಟ್ ನಲ್ಲಿ ಈ ಕುರಿತು ಬರೆದಿದ್ದಳು ಎಂದು ಸಚಿವರು ಪ್ರತಿಪಾದಿಸಿದ್ದು, ಕೋಟಾದಲ್ಲಿ ಈವರೆಗೆ ನಡೆದ ಎಲ್ಲ ಆತ್ಮಹತ್ಯೆಗಳ ಸಮಗ್ರ ತನಿಖೆ ನಡೆದರೆ ಸತ್ಯಾಸತ್ಯತೆ ಹೊರ ಬೀಳಲಿದೆ ಎಂದಿದ್ದರು. ಆದರೆ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ತನಿಖಾಧಿಕಾರಿ ದವೇಶ್ ಭಾರದ್ವಾಜ್, ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ದೊರೆತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಜೊತೆಗೆ ಕೋಟಾದ ಸಹಾಯಕ ರಕ್ಷಣಾಧಿಕಾರಿ ಧರಮ್ ವೀರ್ ಕೂಡ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ವಿದ್ಯಾರ್ಥಿನಿ ರೀಚಾ ಸಿನ್ಹಾ ಆತ್ಮಹತ್ಯೆ ಪ್ರಕರಣದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಸಂಪೂರ್ಣ ತನಿಖೆಯ ಬಳಿಕವಷ್ಟೇ ಸಾವಿಗೆ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ. ಇನ್ನು ತಮ್ಮ ಮಗಳ ಸಾವಿಗೆ ಪ್ರೇಮ ವೈಫಲ್ಯವೇ ಕಾರಣವೆಂದು ಹೇಳಿರುವ ಸಚಿವರ ಹೇಳಿಕೆಗೆ ರೀಚಾ ತಂದೆ ಆಘಾತ ವ್ಯಕ್ತಪಡಿಸಿದ್ದು, ಸಚಿವರ ಬಳಿ ದಾಖಲೆಗಳಿದ್ದರೆ ಸಾಬೀತುಪಡಿಸಲಿ ಎಂದು ಆಗ್ರಹಿಸಿದ್ದಾರೆ.