ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಿ-20 ಶೃಂಗ ಸಭೆಗೆ ಭಾಗಿಯಾದ ಗಣ್ಯರಿಗೆ ಭಾರತ-ಪ್ರಜಾಪ್ರಭುತ್ವದ ತಾಯಿ ಹಾಗೂ ಭಾರತದಲ್ಲಿ ಚುನಾವಣೆಗಳು ಎಂಬ ಎರಡು ಕಿರು ಪುಸ್ತಕಗಳನ್ನು ನೀಡಿದೆ.
ಹೌದು, ‘ಭಾರತ, ಪ್ರಜಾಪ್ರಭುತ್ವದ ತಾಯಿ’ ಹಾಗೂ ‘ಭಾರತದಲ್ಲಿ ಚುನಾವಣೆಗಳು’ ಎಂಬ ಎರಡು ಕಿರು ಪುಸ್ತಕಗಳನ್ನು ಜಿ20 ಶೃಂಗಸಭೆಯಲ್ಲಿ ಭಾಗಿಯಾದ ಗಣ್ಯರಿಗೆ ನೀಡಲಾಗಿದ್ದು, ಈ ಕೈಪಿಡಿಗಳಲ್ಲಿ ಭಾರತದ ಇತಿಹಾಸವು ಕ್ರಿಸ್ತ ಪೂರ್ವ 6 ಸಾವಿರಕ್ಕಿಂತಾ ಹಳೆಯದು ಎಂದು ವಿವರಿಸಲಾಗಿದೆ.
ಈ ಪುಸ್ತಕದಲ್ಲಿ ನಾಲ್ಕು ವೇದಗಳಲ್ಲಿ ಮೊದಲನೆಯದಾದ ಋಗ್ವೇದದ ಪ್ರಸ್ತಾಪವಿದೆ. ಈ ಪುಸ್ತಕದಲ್ಲಿ ಬರುವ ಪ್ರಜಾಪ್ರತಿನಿಧಿ ವಿಭಾಗದ ಉಲ್ಲೇಖವಿದೆ. ರಾಮಾಯಣ ಹಾಗೂ ಮಹಾಭಾರತದಲ್ಲಿ ಬರುವ ಪ್ರಜಾಪ್ರಭುತ್ವ ಮಾದರಿಗಳನ್ನೂ ವಿವರಿಸಲಾಗಿದೆ. ಭಗವಾನ್ ಶ್ರೀರಾಮ ತನ್ನ ತಂದೆಯ ಆದೇಶಕ್ಕೆ ತಲೆಬಾಗಿ ದಶರಥ ಮಹಾರಾಜನ ಸಚಿವರ ಅನುಮತಿ ಬಳಿಕ ವನವಾಸಕ್ಕೆ ತೆರಳಿದ ಪ್ರಸ್ತಾಪ ಸೇರಿದಂತೆ ಹಲವು ಮಾಹಿತಿಗಳನ್ನು ಒಳಗೊಂಡಿದೆ.
ಈ ಎರಡೂ ಕಿರು ಪುಸ್ತಕಗಳ ಸಾಫ್ಟ್ ಕಾಪಿ ಜಿ – 20 ಅಧಿಕೃತ ವೆಬ್‌ಸೈಟ್‌ನಲ್ಲೂ ಅಪ್‌ಲೋಡ್ ಮಾಡಲಾಗಿದೆ. ಈ ಲಿಂಕ್ ಕ್ಲಿಕ್ ಮಾಡುವ ಮೂಲಕ https://ebook.g20.org/ebook/bharatmod/index.html ನೀವು ಪುಸ್ತಕವನ್ನು ಓದಬಹುದಾಗಿದೆ.