ಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷಾ ಭೋಗ್ಲೆ ಅವರು ಕ್ರೀಡಾ ಪ್ರಸಾರ ಪ್ರಪಂಚದಲ್ಲಿ ತಮ್ಮದೇ ಆದ ಸ್ಥಾನವನ್ನು ಹೊಂದಿದ್ದಾರೆ. ಕ್ರಿಕೆಟ್ ಕಾಮೆಂಟೇಟರ್ ಆಗಿ 40 ವರ್ಷಗಳನ್ನು ಆಚರಿಸುತ್ತಿದ್ದಾರೆ. ಇದೀಗ 2023ರಲ್ಲಿ ಭೋಗ್ಲೆ ಅವರ ಪ್ರಯಾಣವನ್ನು ಹಿಂತಿರುಗಿ ನೋಡುವುದು ಯೋಗ್ಯವಾಗಿದೆ. ವಿವರಣೆಗಾರರಾಗಿ ಅದು ಹೇಗೆ ಪ್ರಾರಂಭವಾಗಿ ವೃತ್ತಿಯ ಉತ್ತುಂಗಕ್ಕೆ ಕರೆದೊಯ್ಯಿತು ಎಂಬುದರ ಬಗ್ಗೆ ಅವರು ಹಂಚಿಕೊಂಡಿದ್ದಾರೆ.
ಭೋಗ್ಲೆ ಅವರು ತಮ್ಮ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಮರಿಸಿದರು. ದೂರದರ್ಶನದ ಆಹ್ವಾನದ ಸ್ನ್ಯಾಪ್ಶಾಟ್ ಅನ್ನು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಏಕದಿನ ಪಂದ್ಯಕ್ಕೆ ನಿರೂಪಕರಾಗಿ ತಮ್ಮ ಚೊಚ್ಚಲ ಪ್ರವೇಶದ ಬಗ್ಗೆ ಹಂಚಿಕೊಂಡ್ರು.
ನಾಲ್ಕು ದಶಕಗಳ ಹಿಂದೆ, ಇದೇ ದಿನ ನಾನು ನನ್ನ ಮೊದಲ ಏಕದಿನ ಅನುಭವವನ್ನು ಹೊಂದಿದ್ದೇನೆ ಎಂದು ಭೋಗ್ಲೆ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ. ಅವಕಾಶಗಳನ್ನು ಹುಡುಕುತ್ತಿದ್ದ ಉತ್ಸಾಹಿ ಯುವಕನಾಗಿದ್ದ ತನಗೆ ಒಂದೊಳ್ಳೆ ಅವಕಾಶ ನೀಡಿದ ಡಿಡಿ-ಹೈದರಾಬಾದ್ನ ಸಹೃದಯ ನಿರ್ಮಾಪಕರನ್ನು ನಾನು ನೆನಪಿಸಿಕೊಳ್ಳುತ್ತೇನೆ. ಪಂದ್ಯದ ಹಿಂದಿನ ಸಂಜೆ, ನಾನು ರೋಲರ್ ಮೇಲೆ ಕುಳಿತು, ಸರಳ ಟೀ ಶರ್ಟ್ ಧರಿಸಿ, ಕೆಲಸ ಮಾಡುತ್ತಿದ್ದೆ. ಆದರೆ, ಮರುದಿನ ನಾನು ಎರಡು ಕಾಮೆಂಟರಿ ಹಂತಗಳನ್ನು ಹೊಂದಿದ್ದೆ. ಮುಂದಿನ 14 ತಿಂಗಳುಗಳಲ್ಲಿ, ನನಗೆ ಇನ್ನೂ ಎರಡು ಏಕದಿನ ಪಂದ್ಯಗಳು ಮತ್ತು ಟೆಸ್ಟ್ ಪಂದ್ಯಗಳಲ್ಲಿ ಕಾಮೆಂಟ್ ಮಾಡುವ ಅವಕಾಶ ಸಿಕ್ಕಿತು. ಇದಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಅವರು ತಿಳಿಸಿದ್ರು.
ಭೋಗ್ಲೆ ಅವರ ಕಾಮೆಂಟರಿ ಕ್ರಿಕೆಟ್ ಇತಿಹಾಸದಲ್ಲಿ ಮರೆಯಲಾಗದ ಅನೇಕ ಕ್ಷಣಗಳ ಭಾಗವಾಗಿದೆ. ಅಂತಹ ಒಂದು ನಿದರ್ಶನವೆಂದರೆ 2022ರ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ-20 ವಿಶ್ವಕಪ್ ಪಂದ್ಯದ ಸಮಯದಲ್ಲಿ,ವಿರಾಟ್ ಕೊಹ್ಲಿ ಅವರ ಅದ್ಭುತ ಪ್ರದರ್ಶನವು ಭಾರತವನ್ನು ಐತಿಹಾಸಿಕ ಗೆಲುವಿಗೆ ಕಾರಣವಾಯಿತು. ಆ ಪಂದ್ಯದ ವೇಳೆ ಭೋಗ್ಲೆ ಅವರ ಕಾಮೆಂಟರಿ ವಿಶ್ವಾದ್ಯಂತ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಇಂದಿಗೂ ಅಚ್ಚೊತ್ತಿದೆ.
ತಮ್ಮ ಮೊದಲ ಪೇ ಸ್ಲಿಪ್ ಅನ್ನು ಹಂಚಿಕೊಂಡಿರುವ ಭೋಗ್ಲೆ, ಅವರು ಮೊದಲು ಪಡೆದ ಸಂಬಳ 350 ರೂ. ಇಂದು ಲಕ್ಷಾಧಿಪತಿ ಅಥವಾ ಕೋಟ್ಯಧಿಪತಿಯಾಗಿರಬಹುದು. ಆದರೆ, ಅತ್ಯಂತ ಸಣ್ಣ ಸಂಬಳದಿಂದಲೇ ಅವರು ಇಂದು ಉನ್ನತ ಮಟ್ಟಕ್ಕೆ ಏರಿದ್ದಾರೆ.
ಅವರ ಅಸಾಧಾರಣ ಕಾಮೆಂಟರಿ ಕೌಶಲಗಳನ್ನು ಮೀರಿ, ಭೋಗ್ಲೆ ಅವರು ಪಂದ್ಯಗಳ ವಿಶ್ಲೇಷಣೆಗಾಗಿ ಸಹ ಗೌರವಿಸಲ್ಪಡುತ್ತಾರೆ. ಪಂದ್ಯದ ವೇಳೆ ಅವರು ನೀಡುವ ಒಳನೋಟವುಳ್ಳ ವ್ಯಾಖ್ಯಾನಗಳನ್ನು ಕೇಳಲು ಕ್ರಿಕೆಟ್ ಉತ್ಸಾಹಿಗಳು ಕುತೂಹಲದಿಂದ ನಿರೀಕ್ಷಿಸುತ್ತಾರೆ. ಇದೀಗ ಅವರಿಗೆ 62 ವರ್ಷ ವಯಸ್ಸಾಗಿದ್ದು, ಕ್ರಿಕೆಟ್ ಕಾಮೆಂಟರಿಯಲ್ಲಿ ಉನ್ನತ ವ್ಯಕ್ತಿಯಾಗಿ ಮುಂದುವರೆದಿದ್ದಾರೆ. ಅವರ ಧ್ವನಿಯು ಜಗತ್ತಿನಾದ್ಯಂತದ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ಅನುರಣಿಸುತ್ತಿದೆ.