ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟಗಳು ಕರೆ ನೀಡಿರುವ ಮುಷ್ಕರದ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ಸಂಸ್ಥೆಗಳ ಬೇಡಿಕೆ ಈಗಿನದ್ದಲ್ಲ, ಕಳೆದ ನಾಲ್ಕು ವರ್ಷಗಳಿಂದಲೂ ಇದ್ದವು. ಮುಖ್ಯಮಂತ್ರಿಗಳು ಸಭೆ ಕರೆದಾಗ ಸಂಘಟನೆಗಳು ಬಂದಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಟ್ಯಾಕ್ಸ್ ಹೆಚ್ಚಳ, ಶಕ್ತಿ ಯೋಜನೆ ಮಾತ್ರ ನಮ್ಮ ಸರ್ಕಾರ ಬಂದ ಮೇಲೆ ಆಗಿರುವುದು. ಸಿಎಂ ಸಭೆ ಕರೆದಾಗ ಸಾರಿಗೆ ಸಂಘಟನೆಗಳು ಬಂದಿಲ್ಲ. ಕಾನೂನಾತ್ಮಕವಾಗಿ ಅವರ ಬೇಡಿಕೆ ಏನು ಈಡೇರಿಸಲು ಸಾಧ್ಯ ಈಡೇರಿಸುತ್ತೇವೆ. ಸಾರಿಗೆ ಚಾಲಕರ ಪರವಾಗಿಯೇ ನಾನು ಇದ್ದೇನೆ ಎಂದರು.
ಶಕ್ತಿ ಯೋಜನೆಯಿಂದ ನಷ್ಟ ಆಗಿದೆ. ಪರಿಹಾರ ಕೊಡಿ ಅಂತಿದ್ದಾರೆ. ಅದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ನಮ್ಮ ಶಕ್ತಿ ಯೋಜನೆ ಇರುವುದೇ ಬಜೆಟ್ ನಲ್ಲಿ 2500 ಕೋಟಿ ರೂ. ಸಾರಿಗೆ ಚಾಲಕರು 3 ಲಕ್ಷ ಜನರಿದ್ದಾರೆ. ಅವರ ಬೇಡಿಕೆ ಪ್ರಕಾರ ಪರಿಹಾರ ಕೊಟ್ಟರೆ 5009 ಕೋಟಿ ರೂ ಆಗುತ್ತದೆ. ಇದನ್ನು ಈಡೇರಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.