ಬೆಂಗಳೂರು: ಪೊಲೀಸ್ ಠಾಣೆಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಮೂರು ತಿಂಗಳಲ್ಲಿ ಮುಕ್ತಾಯಗೊಳಿಸಲು ರಾಜ್ಯ ಪೊಲೀಸ್ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.
1.3 ಲಕ್ಷಕ್ಕೂ ಹೆಚ್ಚಿನ ಹಳೆ ಪ್ರಕರಣಗಳನ್ನು ಮೂರು ತಿಂಗಳ ಕಾಲಮಿತಿಯೊಳಗೆ ಮುಕ್ತಾಯಗೊಳಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ನಿಗದಿತ ಅವಧಿಯಲ್ಲಿ ಹಳೆ ಪ್ರಕರಣಗಳಿಗೆ ಮುಕ್ತಿ ನೀಡುವ ಪೊಲೀಸ್ ಅಧಿಕಾರಿಗಳನ್ನು ಪುರಸ್ಕರಿಸಲು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಅಪರಾಧ) ಉಮೇಶ್ ಕುಮಾರ್ ತಿಳಿಸಿದ್ದಾರೆ.
ಹಳೇ ಪ್ರಕರಣಗಳ ವಿಲೇವಾರಿ ಸಂಬಂಧ ರಾಜ್ಯದ ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಐಜಿಪಿಗಳ ಜೊತೆ ಎಡಿಜಿಪಿ ಸಮಾಲೋಚನೆ ನಡೆಸಿದ್ದಾರೆ.
10 ವರ್ಷಗಳಿಂದ ರಾಜ್ಯದಲ್ಲಿ ಗಂಭೀರ ಸ್ವರೂಪದ ಕೃತ್ಯಗಳಾದ ಕೊಲೆ, ದರೋಡೆ, ಸುಲಿಗೆ, ಅವಳಿ ಕೊಲೆ ಸೇರಿದಂತೆ ಇತರೆ ಹಾಗೂ ಗಂಭೀರವಲ್ಲದ ಜಗಳ, ನಿಂದನೆ ಇತ್ಯಾದಿ ಕೃತ್ಯಗಳ ಸಂಬಂಧ ಸಕಾಲಕ್ಕೆ ತನಿಖೆ ನಡೆಸದ ಪತ್ತೆಯಾಗದ ಪ್ರಕರಣಗಳೆಂದು ಹೇಳಿ 1.3 ಲಕ್ಷ ಪ್ರಕರಣಗಳು ಕಡತಗಳಲ್ಲೇ ಉಳಿದಿವೆ. ಪ್ರತಿ ಠಾಣೆಯಿಂದ ಇಂತಹ ಪ್ರಕರಣಗಳ ಮಾಹಿತಿ ಪಡೆದು ತ್ವರಿತವಾಗಿ ವಿಲೇವಾರಿ ಮಾಡುವಂತೆ ಎಡಿಜಿಪಿ ಉಮೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಹಳೇ ಪ್ರಕರಣಗಳ ವಿಲೇವಾರಿಯಲ್ಲಿ ರಾಮನಗರ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಇನ್ನುಳಿದಂತೆ ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು ಜಿಲ್ಲೆಗಳ ಪೊಲಿಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.