ಬೆಂಗಳೂರು: ಸರ್ಕಾರಿ ನೌಕರರಿಗೆ ಉಚಿತ ಚಿಕಿತ್ಸೆ ಸೌಲಭ್ಯ ಪಡೆಯಲು ಜಾರಿಯಲ್ಲಿರುವ ಜ್ಯೋತಿ ಸಂಜೀವಿನಿ ಆರೋಗ್ಯ ವಿಮಾ ಯೋಜನೆಯನ್ನು ಅನುದಾನಿತ ಶಾಲಾ ಶಿಕ್ಷಕರಿಗೂ ವಿಸ್ತರಿಸಲಾಗುವುದು. ಈ ಸಂಬಂಧ ಮಾಹಿತಿ ಸಂಗ್ರಹಕ್ಕೆ ಮುಂದಿನ ವಾರ ಸಭೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಆಯೋಜಿಸಿದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಸಮಾವೇಶದಲ್ಲಿ ಮಾತನಾಡಿದ ಅವರು, ಅನುದಾನಿತ ಶಿಕ್ಷಕರಿಗೆ ಆರೋಗ್ಯ ಸಂಜೀವಿನಿ ಯೋಜನೆ ವಿಸ್ತರಿಸುವ ಬಗ್ಗೆ ಸಾಧಕ ಬಾಧಕಗಳ ಕುರಿತಾಗಿ ಚರ್ಚಿಸಲು ಮುಂದಿನ ವಾರ ಅನುದಾನಿತ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆ ಕರೆಯಲಾಗುವುದು ಎಂದು ತಿಳಿಸಿದ್ದಾರೆ.
ಆರೋಗ್ಯ ಸಂಜೀವಿನಿ ಸರ್ಕಾರಿ ನೌಕರರಿಗೆ ಕ್ಯಾನ್ಸರ್, ನರರೋಗ ಮೊದಲಾದ ಗಂಭೀರ ಕಾಯಿಲೆಗಳಿಗೆ ಆರೋಗ್ಯ ಸುರಕ್ಷಾ ಟ್ರಸ್ಟ್ ನಡಿ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಕಲ್ಪಿಸುವ ಯೋಜನೆಯಾಗಿದ್ದು, ಅನ್ನದಾನಿತ ಶಿಕ್ಷಕರಿಗೆ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಆಗಬೇಕಿರುವುದರಿಂದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಅದಕ್ಕೆ ಮುನ್ನ ರಾಜ್ಯದಲ್ಲಿ ಅನುದಾನಿತ ಶಿಕ್ಷಕರು ಎಷ್ಟಿದ್ದಾರೆ, ಪ್ರೀಮಿಯಂ ಎಷ್ಟು ಬೇಕಾಗುತ್ತದೆ, ಎಷ್ಟು ಹಣ ಒದಗಿಸಬೇಕಾಗುತ್ತದೆ ಎಂಬುದರ ಬಗ್ಗೆ ಚರ್ಚೆ ನಡೆಸಿ ಅಂದಾಜು ಮಾಹಿತಿ ಸಿದ್ದಪಡಿಸಿ ಸಿಎಂ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.