ಹುಬ್ಬಳ್ಳಿ: ನವದೆಹಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಗೆ ವಿಪಕ್ಷ ನಾಯಕರಿಗೆ ಆಹ್ವಾನವಿಲ್ಲ. ಈ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿಪಕ್ಷ ನಾಯಕರು ಸಭೆಗೆ ಗೈರಾಗಿದ್ದಾರೆ.
ಜಿ-20 ಸಭೆಗೆ ವಿಪಕ್ಷ ನಾಯಕರಿಗೆ ಆಹ್ವಾನ ನೀಡದಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನವದೆಹಲಿಯಲ್ಲಿ ನಡೆಯುತ್ತಿರುವ ಜಿ-20 ಸಭೆಗೆ ವಿಪಕ್ಷ ನಾಯಕರಿಗೆ ಆಹ್ವಾನ ನೀಡಿಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಅಧಿಕೃತವಾಗಿ ರಾಜ್ಯಸಭೆಯ ವಿರೋಧಪಕ್ಷದ ನಾಯಕರಾಗಿದ್ದು, ಅವರನ್ನು ಜಿ-20 ಸಭೆ ಆಹ್ವಾನಿಸದಿರುವುದು ತಪ್ಪು ಎಂದು ಹೇಳಿದರು.
ವಿಶ್ವದ 20 ಶಕ್ತಿಶಾಲಿ ರಾಷ್ಟ್ರಗಳ ಗುಂಪಾದ ಜಿ-20 ಶೃಂಗಸಭೆಗೆ ಈ ಬಾರಿ ಭಾರತ ಆತಿಥ್ಯ ವಹಿಸಿದ್ದು, ದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಟಪ್ ನಲ್ಲಿ ಇಂದಿನಿಂದ ಎರಡು ದಿನಗಳ ಶೃಂಗಸಭೆ ನಡೆಯುತ್ತಿದೆ.