ಬೆಂಗಳೂರು : ನಿನ್ನೆ ಸುರಿದ ಭಾರಿ ಮಳೆಗೆ ಬೆಂಗಳೂರು-ಬನ್ನೇರುಘಟ್ಟ ರಸ್ತೆ ಜಲಾವೃತವಾಗಿದ್ದು, ಸ್ಥಳಕ್ಕೆ ಜೆಸಿಬಿಯಲ್ಲಿ ಟ್ರಾಫಿಕ್ ಪೊಲೀಸರು ಬಂದಿರುವುದು ವಿಶೇಷವಾಗಿತ್ತು.
ನಿನ್ನೆ ರಾತ್ರಿ ಸುರಿದ ಮಳೆಗೆ ಕಾಳೇನ ಅಗ್ರಹಾರ ಸಮೀಪದ ಡೆಕಾತ್ಲಾನ್ ಬಳಿಯ ಬೆಂಗಳೂರು-ಬನ್ನೇರುಘಟ್ಟ ರಸ್ತೆ ಜಲಾವೃತಗೊಂಡಿದೆ. ಇದರಿಂದ ವಾಹನ ಸವಾರರಿಗೆ ಬಹಳ ತೊಂದರೆಯಾಗಿದೆ. ಈ ಹಿನ್ನೆಲೆ ಟ್ರಾಫಿಕ್ ಪೊಲೀಸರು ಜೆಸಿಬಿಯಲ್ಲಿ ಸ್ಥಳಕ್ಕೆ ಬಂದು ಜೆಸಿಬಿ ಮೂಲಕ ರಸ್ತೆಗಿಳಿದು ಜಲ್ಲಿಕಲ್ಲು ಹಾಕಿ ರಸ್ತೆಗೆ ನೀರು ಬರದಂತೆ ತಡೆದಿದ್ದಾರೆ.
ಅದೇ ರೀತಿ ಹೆಣ್ಣೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪೂರ್ವಾಂಕರ ಅಪಾರ್ಟ್ಮೆಂಟ್ ಬಳಿಯ ರಸ್ತೆ ಜಲಾವೃತಗೊಂಡು ವಾಹನ ಸಂಚಾರ ನಿಧಾನವಾಗಿದೆ ಎಂದು ಟ್ರಾಫಿಕ್ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಹಲವು ಕಡೆ ನಿನ್ನೆ ಭಾರಿ ಮಳೆಯಾಗಿದ್ದು, ಇಂದು ಸಹ ಹವಾಮಾನ ಇಲಾಖೆ ಭಾರಿ ಮಳೆ ಮುನ್ನೆಚ್ಚರಿಕೆ ನೀಡಿದೆ.