ಬೆಳಗಾವಿ: ಬ್ಯಾಂಕ್ ಖಾತೆ ನಿಷ್ಕ್ರಿಯಗೊಂಡಿರುವುದರಿಂದ ಗೃಹಲಕ್ಷ್ಮಿ ಯೋಜನೆಯಡಿ 7ರಿಂದ 8 ಲಕ್ಷ ಕುಟುಂಬಗಳ ಯಜಮಾನಿಯರ ಖಾತೆಗೆ ಹಣ ಪಾವತಿಸುವಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಂತ್ರಿಕ ಸಮಸ್ಯೆಯಿಂದ ಖಾತೆಗೆ ಹಣ ಜಮಾ ಆಗದ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ ಬ್ಯಾಂಕ್ ಖಾತೆ ಸಕ್ರಿಯಗೊಳಿಸುವ ಮೂಲಕ ಯೋಜನೆ ಸೌಲಭ್ಯ ಪಡೆಯಲು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ ಒಂದು ಕೋಟಿಗೂ ಅಧಿಕ ಫಲಾನುಭವಿಗಳಿದ್ದು, ಒಟ್ಟು 59 ಲಕ್ಷ ಫಲಾನುಭವಿಗಳಿಗೆ ತಲಾ 2000 ರೂ. ಜಮಾ ಮಾಡಲಾಗಿದೆ. ಶನಿವಾರದೊಳಗೆ ಉಳಿದ ಎಲ್ಲಾ ಫಲಾನುಭವಿಗಳಿಗೆ ಹಣ ಪಾವತಿಸಲಾಗುವುದು. ಫಲಾನುಭವಿಗಳ ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿ ಹಣ ಪಾವತಿಯಾಗಿಲ್ಲ. ಅಂತಹ ಖಾತೆ ಸಕ್ರಿಯಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.