ಇಡೀ ವಿಶ್ವವನ್ನೇ ಕಂಗಾಲಾಗಿಸಿದ್ದ ಕೊರೊನಾ ಸೋಂಕು ಮಹಾಮಾರಿ ಈಗ ತಹಬದಿಗೆ ಬಂದಿದೆ. ಈ ಸೋಂಕು ಇನ್ನೂ ಶಾಶ್ವತವಾಗಿ ತೊಲಗಿಲ್ಲವಾದರೂ ಈ ಮೊದಲಿನಂತೆ ಅಷ್ಟಾಗಿ ಆರ್ಭಟ ತೋರಿಸುತ್ತಿಲ್ಲ. ಇದರ ಮಧ್ಯೆ ಸೋಂಕು ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಇದು ವ್ಯಾಪಕವಾಗಿ ಹರಡಲು ಮೊಬೈಲ್ ಫೋನ್ ಗಳು ಕೂಡಾ ಪ್ರಮುಖ ಕಾರಣ ವಹಿಸಿದ್ದವು ಎಂಬ ಅಂಶ ಇದೀಗ ಬಹಿರಂಗವಾಗಿದೆ.
ಆಸ್ಟ್ರೇಲಿಯಾದ ಬಾಂಡ್ ವಿಶ್ವವಿದ್ಯಾಲಯದ ಸಂಶೋಧಕರು 2019 ರಿಂದ 2023ರ ನಡುವೆ ಹತ್ತು ದೇಶಗಳಲ್ಲಿ 15 ಅಧ್ಯಯನಗಳನ್ನು ಕೈಗೊಂಡಿದ್ದು, ಈ ಸಂದರ್ಭದಲ್ಲಿ ಪರಿಶೀಲಿಸಿದ 511 ಫೋನ್ಗಳ ಪೈಕಿ 231 (ಶೇಕಡ 45) ಮೊಬೈಲ್ ಫೋನ್ ಗಳಲ್ಲಿ ಕೊರೊನಾ ಸೋಂಕಿಗೆ ಕಾರಣವಾಗುವ SARS-CoV-2 ವೈರಸ್ ಕಂಡು ಬಂದಿದೆ. 2022 ರಲ್ಲಿ ಫ್ರಾನ್ಸ್ ಸಂಶೋಧಕರು 19 ಫೋನ್ ಗಳನ್ನು ಪರಿಶೀಲಿಸಿದ ವೇಳೆ ಎಲ್ಲವೂ ಸಹ ಸೋಂಕಿನ ವೈರಾಣು ಹೊಂದಿರುವುದು ಪತ್ತೆಯಾಗಿತ್ತು.
ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಿದ್ದ ವೈದ್ಯರು, ಆರೋಗ್ಯ ಸಿಬ್ಬಂದಿ ಎಷ್ಟೇ ಬಾರಿ ತಮ್ಮ ಕೈಗಳನ್ನು ಸ್ವಚ್ಛಗೊಳಿಸಿದರೂ ಕೂಡ ಒಂದು ಬಾರಿ ಮೊಬೈಲ್ ಬಳಸಿದ ಬಳಿಕ ಸೋಂಕು ಮತ್ತೆ ತಗಲುತ್ತಿತ್ತು ಎಂಬ ಸಂಗತಿಯೂ ಅಧ್ಯಯನಲ್ಲಿ ಕಂಡುಬಂದಿದೆ. ಈ ಹಿಂದೆಯೂ ಕೂಡ ನಡೆದ ಅಧ್ಯಯನದಲ್ಲಿ ವೈರಾಣು 28 ದಿನಗಳ ಕಾಲ ಮೊಬೈಲ್ ಫೋನ್ ಮೇಲೆ ಜೀವಂತವಾಗಿರುವ ಸಂಗತಿ ತಿಳಿದು ಬಂದಿತ್ತು. ವಿಶ್ವದಲ್ಲಿ ಕೋಟ್ಯಾಂತರ ಮಂದಿ ಮೊಬೈಲ್ ಫೋನ್ ಗಳನ್ನು ಬಳಸುತ್ತಿದ್ದು, ಹೀಗಾಗಿ ಕೊರೊನಾ ಸೋಂಕು ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಇವುಗಳು ಕೂಡ ಹರಡುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಎಂಬ ಸಂಗತಿಯನ್ನು ಸಂಶೋಧಕರು ಬಿಚ್ಚಿಟ್ಟಿದ್ದಾರೆ.