ಕೋಲಾರ : ರೈತರು, ಹಾಲು ಉತ್ಪಾದಕರಿಗೆ ಕೋಚಿಮುಲ್ ಸಿಹಿಸುದ್ದಿ ನೀಡಿದ್ದು, ಹಸಿರು ಮೇವು ಬೆಳೆಯುವ ರೈತರು, ಹಾಲು ಉತ್ಪಾದಕರಿಗೆ ಪ್ರತಿ ಎಕರೆಗೆ 3,000 ರೂ.ಗಳಂತೆ ಪ್ರೋತ್ಸಾಹಧನ ಹಾಗೂ ಶೇ.50 ರಷ್ಟು ರಿಯಾಯಿತಿ ದರದಲ್ಲಿ ಮೇವಿನ ಬೀಜ ನೀಡಲು ಕೋಚಿಮುಲ್ ನಿರ್ಧರಿಸಿದೆ.
ಕೋಚಿಮುಲ್ ಅಧ್ಯಕ್ಷ ಕೆ.ವೈ. ನಂಜೇಗೌಡ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ ಹಿನ್ನೆಲೆಯಲ್ಲಿ ಒಕ್ಕೂಟದ ವ್ಯಾಪ್ತಿಯಲ್ಲಿ ಹಸಿರು ಮೇವು ಕೊರತೆಯಿಂದ ಮುಂದಿನ ದಿನಗಳಲ್ಲಿ ಹಾಲು ಉತ್ಪಾದನೆ ಕುಂಠಿತವಾಗದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಒಕ್ಕೂಟದ ವ್ಯಾಪ್ತಿಯ ಪ್ರತಿ ತಾಲೂಕಿಗೆ ಕನಿಷ್ಟ 250 ಎಕರೆ ಗರಿಷ್ಟ ಎಷ್ಟು ಬೇಕಾದರೂ ಬೆಳೆಯುವಂತೆ ಅವಕಾಶ ಕಲ್ಪಿಸಿಕೊಟ್ಟಿರುವುದರಿಂದ ಅಂದಾಜು ವೆಚ್ಚ 2.5 ಕೋಟಿಗಳವರೆಗೆ ವೆಚ್ಚವಾಗಬಹುದು ಎಂದು ಕೆ.ವೈ. ನಂಜೇಗೌಡ ತಿಳಿಸಿದ್ದಾರೆ.