ಬೆಂಗಳೂರು: ಬಿಸಿಲ ಝಳದಿಂದ ಕಂಗೆಟ್ಟಿದ್ದ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದ್ದು, ಇಡೀ ಬೆಂಗಳೂರಿನಲ್ಲಿ ತಂಪು ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ಮಕ್ಕಳಲ್ಲಿ ಅಡೆನೊ ವೈರಸ್ ಎಂಬ ಹೊಸ ಸೋಂಕು ಪತ್ತೆಯಾಗುತ್ತಿದೆ.
ಹವಾಮಾನ ವೈಪರೀತ್ಯದಿಂದಾಗಿ ಪುಟ್ಟ ಮಕ್ಕಳಲ್ಲಿ ಅಡೆನೊ ವೈರಸ್ ಎಂಬ ಸೋಂಕು ಕಂಡು ಬರುತ್ತಿದ್ದು, ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಾಗಿರುವ ಶೇ.20-30 ಮಕ್ಕಳು ಈ ಸೋಂಕಿನಿಂದ ಬಳಲುತ್ತಿದ್ದಾರೆ.
ಬೇರೆ ಬೇರೆ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಬಹುತೇಕ ಮಕ್ಕಳಲ್ಲಿ ಅಡೆನೊ ವೈರಸ್ ಪತ್ತೆಯಾಗಿದೆ. ಹಾಗಾಗಿ ಮಕ್ಕಳ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಅಸ್ತಮಾ, ಉಸಿರಾಟದ ಸಮಸ್ಯೆ, ಹೃದಯಸಂಬಂಧಿ ಕಾಯಿಲೆ ಇರುವವರಲ್ಲಿ ಅಡೆನೊ ವೈರಸ್ ಪತ್ತೆಯಾದರೆ ಅಂತವರಲ್ಲಿ ಸೋಂಕು ಹೆಚ್ಚು ಗಂಭೀರವಾಗಿರುತ್ತದೆ. ಈ ವೈರಸ್ ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಮಕ್ಕಳು ಗುಂಪಾಗಿ ಸೇರುವ ಕಡೆಗಳಲ್ಲಿ, ಡೇ ಕೇರ್ ಸೆಂಟರ್, ಸೋಂಕಿತ ಮಕ್ಕಳು ಕೆಮ್ಮಿದಾಗ ಅಥವಾ ಸೀನಿದಾಗ ಗಾಳಿಯಿಂದ ಇತರರಿಗೂ ಹರಡುತ್ತದೆ.
ಅಡೆನೊ ವೈರಸ್ ಸೋಂಕಿಗೆ ಒಳಗಾದವರಲ್ಲಿ ಜ್ವರದ ಜೊತೆ ವಾಂತಿ ಮತ್ತು ಅತಿಸಾರ ಕಾಣಿಸಿಕೊಳ್ಳುತ್ತದೆ. ಇದರಿಂದ ದೇಹ ನಿರ್ಜಲೀಕರಣಗೊಳ್ಳಲಿದೆ. ಹಾಗಾಗಿ ಸಾಕಷ್ಟು ನೀರು, ಹಣ್ಣಿನ ರಸ ಸೇವಿಸುವುದು ಉತ್ತಮ. ಸ್ವಚ್ಛತೆ ಅಗತ್ಯ. ಬಿಸಿ ಹಾಗೂ ತಾಜಾ ನೀರು ಸೇವನೆ ಮಾಡಬೇಕು. ಸೋಂಕು ಕಂಡುಬಂದಲ್ಲಿ ವೈದ್ಯರ ಬಳಿ ಸಲಹೆ ಪಡೆಯುವುದು ಉತ್ತಮ.