ಬೆಳಗಾವಿ: ರಾಜ್ಯದ ಒಂದೊಂದೇ ಜಿಲ್ಲೆಗಳಲ್ಲಿ ಸಾಲು ಸಾಲು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿದ್ದಂತೆ ಕಾಣುತ್ತಿಲ್ಲ. ಚಾಮರಾಜನಗರದಲ್ಲಿ 13ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಏಕಕಾಲದಲ್ಲಿ ಬಾಗಿಲು ಮುಚ್ಚಿದ್ದವು. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಗಡಿ ಜಿಲ್ಲೆ ಬೆಳಗಾವಿ ಸರದಿ.
2023-24ನೇ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿ ಕೊರತೆ ಹಾಗೂ ಶಿಕ್ಷಕರ ಕೊರತೆಯಿಂದಾಗಿ ಬೆಳಗಾವಿ, ಚಿಕ್ಕೋಡಿಯಲ್ಲಿ 15ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಬಂದ್ ಆಗಿವೆ.
ಹತ್ತಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಸಮೀಪದ ಶಾಲೆಗಳೊಂದಿಗೆ ವಿಲೀನ ಮಾಡಲಾಗುತ್ತಿದೆ. ಬೆಳಗಾವಿ ನಗರದಲ್ಲಿ 1516 ಶಾಲೆಗಳು ಹಾಗೂ ಚಿಕ್ಕೋಡಿಯಲ್ಲಿ 1982 ಶಾಲೆಗಳಿವೆ. ಎರಡೂ ನಗರಗಳಲ್ಲಿ ಇರುವ 3498 ಶಾಲೆಗಳ ಪೈಕಿ 340 ಶಾಲೆಗಳು ಪ್ರೌಢಶಾಲೆಗಳಾಗಿವೆ. ಈ ಶಾಲೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಪ್ರತಿ ವರ್ಷ ಪ್ರಾಥಮಿಕ ಶಾಲೆಗಳ ದಾಖಲಾತಿ ಕಡಿಮೆಯಾಗುತ್ತಿದೆ. ಸರ್ಕಾರದ ಮಾಹಿತಿ ಪ್ರಕಾರ 10ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮುಚ್ಚಲಾಗುತ್ತಿದೆ ಅಥವಾ ಇತರ ಶಾಲೆಗಳೊಂದಿಗೆ ವಿಲೀನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎರಡೂ ತಾಲೂಕಿನಲ್ಲಿ ಈವರೆಗೆ 15 ಶಾಲೆಗಳಿಗೆ ಬೀಗ ಹಾಕಲಾಗಿದೆ.