ಭಾರತದಲ್ಲಿ ಸ್ಟಾರ್ ನಟರಿಗೇನೂ ಕೊರತೆಯಿಲ್ಲ. ಆದ್ರೆ ಸಂಭಾವನೆ ವಿಚಾರದಲ್ಲಿ ದಕ್ಷಿಣದ ಸೂಪರ್ ಸ್ಟಾರ್ ರಜನೀಕಾಂತ್ ಎಲ್ಲರಿಗಿಂತ ಮುಂದಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಹೆಗ್ಗಳಿಕೆಗೆ ಪಡೆಯಪ್ಪ ಪಾತ್ರರಾಗಿದ್ದಾರೆ. ಜೈಲರ್ ಚಿತ್ರದ ಯಶಸ್ಸಿನ ನಂತರ, ಮೆಗಾಸ್ಟಾರ್ ರಜನಿಕಾಂತ್ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಂಡರು. ಇತ್ತೀಚಿನ ವರದಿಗಳ ಪ್ರಕಾರ ಜೈಲರ್ ಚಿತ್ರಕ್ಕೆ ರಜನಿಕಾಂತ್ ಭಾರೀ ಮೊತ್ತವನ್ನ ಸಂಭಾವನೆಯಾಗಿ ಪಡೆದಿದ್ದಾರೆ.
ಜೈಲರ್ ಚಿತ್ರದ ನಿರ್ಮಾಪಕ ಕಲಾನಿಧಿ ಮಾರನ್ ಇತ್ತೀಚೆಗೆ ರಜನಿಕಾಂತ್ ಅವರಿಗೆ ಲಾಭ ಹಂಚಿಕೆ ಚೆಕ್ ನೀಡಿದ್ದಾರಂತೆ. ಇದು 10 ಅಥವಾ 20 ಕೋಟಿ ರೂಪಾಯಿಯ ಚೆಕ್ ಅಲ್ಲ, ಸಂಪೂರ್ಣ 100 ಕೋಟಿ ಎಂದು ಹೇಳಲಾಗುತ್ತಿದೆ. ರಜನಿಕಾಂತ್ ಅವರಿಗೆ ಜೈಲರ್ ಚಿತ್ರದ ನಟನೆಗಾಗಿ ಈ ಹಿಂದೆ 110 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿತ್ತು. ಹಾಗಾಗಿ ಒಟ್ಟಾರೆ ರಜನಿ ಜೈಲರ್ ಸಿನೆಮಾಗೆ 210 ಕೋಟಿ ರೂಪಾಯಿ ಸಂಭಾವನೆ ಪಡೆದಂತಾಗಿದೆ. ಇದೀಗ ರಜನಿಕಾಂತ್ ಭಾರತದ ಅತ್ಯಂತ ದುಬಾರಿ ನಟ.
ರಜನಿಕಾಂತ್‌ಗೆ 210 ಕೋಟಿ ರೂಪಾಯಿ ಸಂಭಾವನೆ ನೀಡಿರುವ ಬಗ್ಗೆ ಜೈಲರ್ ನಿರ್ಮಾಪಕರಿಂದ ಅಧಿಕೃತ ಹೇಳಿಕೆ ಬಂದಿಲ್ಲ. ರಜನೀಕಾಂತ್ ಕೂಡ ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ. ಇನ್ನೊಂದೆಡೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಜೈಲರ್ ಚಿತ್ರ ಸೂಪರ್ ಹಿಟ್ ಆಗಿದೆ. ಯಾವುದೇ ಹೈ-ಫೈ ಪ್ರಚಾರವಿಲ್ಲದೆ ಗದರ್ 2 ಮತ್ತು OMG 2 ಗಿಂತ ಒಂದು ದಿನ ಮುಂಚಿತವಾಗಿ ಜೈಲರ್ ಬಿಡುಗಡೆಯಾಯಿತು. ಸದ್ಯ ಜೈಲರ್ ಚಿತ್ರ 600 ಕೋಟಿ ಕಲೆಕ್ಷನ್ ಮಾಡಿದೆ. ಭಾರತದಲ್ಲೇ 328 ಕೋಟಿ ಗಳಿಸಿದೆ. ರಜನಿಕಾಂತ್, ತಮನ್ನಾ ಭಾಟಿಯಾ, ರಮ್ಯಕೃಷ್ಣ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.